ಶೇ. 50 ರಷ್ಟು ಕಾನೂನು ಸಿಬ್ಬಂದಿಗಳಿಗೆ ಕರ್ತವ್ಯ ನಿರ್ವಹಿಸಲು ಅವಕಾಶ: ಜಿ. ಜಗದೀಶ್
ಉಡುಪಿ, ಮೇ 26, 2021: ಜಿಲ್ಲೆಯಲ್ಲಿ ಕೋವಿಡ್-19 ಎರಡನೇ ಅಲೆಯ ಸಾಂಕ್ರಾಮಿಕ ರೋಗವು ತೀವ್ರ ಸ್ವರೂಪವನ್ನು ಪಡೆಯುತ್ತಿರುವ ಹಿನ್ನೆಲೆಯಲ್ಲಿ ಸೋಂಕು ಪ್ರಸರಣದ ಸರಪಳಿಯನ್ನು ಮುರಿಯಲು ಹೊರಡಿಸಲಾದ ಸರಕಾರದ ಆದೇಶದಲ್ಲಿ ಈ ಕೆಳಕಂಡ ಅಂಶಗಳನ್ನು ಸೇರ್ಪಡೆ ಮತ್ತು ಬದಲಾವಣೆ ಮಾಡಿ ಜಿಲ್ಲಾಧಿಕಾರಿ ಜಿ. ಜಗದೀಶ್ ಆದೇಶ ಹೊರಡಿಸಿರುತ್ತಾರೆ.
ನ್ಯಾಯಾಲಯದ ಕೆಲಸದ ದಿನಗಳಲ್ಲಿ ಮಾತ್ರ ವಕೀಲರು, ಅವರ ಕಾನೂನು ಸಿಬ್ಬಂದಿ, ಗುಮಾಸ್ತರು ಹಾಗೂ ಇತರ ಸಹಾಯಕ ಸಿಬ್ಬಂದಿಯವರು ಆಯಾ ಕಚೇರಿಗಳಲ್ಲಿ ನೀಡುವ ಗುರುತಿನ ಚೀಟಿಯೊಂದಿಗೆ ಸಂಚರಿಸಲು ಅನುಮತಿ ನೀಡಲಾಗಿದ್ದು, ಉಳೀದಂತೆ ವ್ಯಕ್ತಿಗಳ ಸಂಚಾರವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿರುತ್ತದೆ.
ವಕೀಲರ ಕಚೇರಿಗಳಲ್ಲಿ ಹಾಗೂ ಕಾನೂನು ಸಂಸ್ಥೆಗಳಲ್ಲಿ ಶೇ. 50 ರಷ್ಟು ಸಿಬ್ಬಂದಿಗಳನ್ನೊಳಗೊಂಡು ಕೋವಿಡ್ ಸಮುಚಿತ ವರ್ತನೆಯನ್ನು ಕಟ್ಟುನಿಟ್ಟಾಗಿ ಪಾಲಿಸುವ ಷರತ್ತಿಗೊಳಪಟ್ಟು ಕರ್ತವ್ಯ ನಿರ್ವಹಿಸಲು ಹಾಗೂ ಎಲ್ಲಾ ರೀತಿಯ ಹೋಮ್ ಡೆಲಿವರಿ ಮತ್ತು ಇ-ಕಾಮರ್ಸ್ ಸೇವೆಗಳಿಗೆ ಅನುಮತಿ ನೀಡಲಾಗಿರುತ್ತದೆ.
ಈ ಮೇಲ್ಕಂಡ ಆದೇಶಗಳನ್ನು ಪಾಲಿಸದೇ ಇರುವವರ ವಿರುದ್ಧ ಪೋಲಿಸ್ ಠಾಣೆಗಳಲ್ಲಿ ಕ್ರಿಮಿನಲ್ ಪ್ರಕರಣಗಳನ್ನು, ವಿಪತ್ತು ನಿರ್ವಹಣಾ ಕಾಯ್ದೆ 2005, ಕರ್ನಾಟಕ ಎಪಿಡೆಮಿಕ್ ಡಿಸೀಸಸ್ ಕಾಯ್ದೆ 2020 ಮತ್ತು ಐ.ಪಿ.ಸಿ ಸೆಕ್ಷನ್ 188 ಪ್ರಕಾರ ನಿಯಮಾನುಸಾರ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.