ದೆಹಲಿ ಕನ್ನಡ ಶಿಕ್ಷಣ ಸಂಸ್ಥೆಯು ಆನ್ ಲೈನ್ ಮೂಲಕ ಜಾದೂ ತರಬೇತಿ ಶಿಬಿರ

 ದೆಹಲಿ ಕನ್ನಡ ಶಿಕ್ಷಣ ಸಂಸ್ಥೆಯು ಆನ್ ಲೈನ್ ಮೂಲಕ ಜಾದೂ ತರಬೇತಿ ಶಿಬಿರ
Share this post

ಮಂಗಳೂರು, ಮೇ 18, 2021: ಮಕ್ಕಳಲ್ಲಿ ಗ್ರಹಿಕಾ ಶಕ್ತಿ, ಚಿಂತನಾ ಶಕ್ತಿ ಹೀಗೆ ಬೌದ್ಧಿಕ ಗುಣಮಟ್ಟವನ್ನು ಮತ್ತಷ್ಟು ಬಲಪಡಿಸುವ ಜೊತೆಗೆ ಸೃಜನಶೀಲ ಚಟುವಟಿಗಳಿಂದ ಮಕ್ಕಳಲ್ಲಿ ಜೀವನೋತ್ಸಾಹವನ್ನು ಪ್ರೇರೇಪಿಸುವ ಸದುದ್ದೇಶದೊಂದಿಗೆ ರಾಷ್ಟ್ರ ರಾಜಧಾನಿ ನವದೆಹಲಿಯ ಲೋಧಿ ಎಸ್ಟೇಟ್‌ನಲ್ಲಿರುವ ದೆಹಲಿ ಕನ್ನಡ ಶಿಕ್ಷಣ ಸಂಸ್ಥೆಯು ಸಂಸ್ಥೆಯ ವಿದ್ಯಾರ್ಥಿಗಳಿಗೆ ಆನ್ ಲೈನ್ ಮೂಲಕ ಆಯೋಜಿಸಿರುವ ‘ಮ್ಯಾಜಿಕ್ ಕಲಿಕಾ ತರಬೇತಿ ಶಿಬಿರ’ ವನ್ನು.ದೆಹಲಿ ಸರಕಾರದ ಶಿಕ್ಷಣ ಇಲಾಖೆ ಹಾಗೂ ಕಾರ್ಮಿಕ ಇಲಾಖೆಯ ಪ್ರಧಾನ ಕಾರ್ಯದರ್ಶಿಯಾದ ಶ್ರೀ ಎಚ್. ರಾಜೇಶ್ ಪ್ರಸಾದ್ ಅವರು ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು ಮಕ್ಕಳ ಕಲಿಕಾ ವಿಧಾನಕ್ಕೆ ಮ್ಯಾಜಿಕ್ ತಂತ್ರಗಳು ಪೂರಕವಾಗಿದೆ. ಮಕ್ಕಳಲ್ಲಿ ಆಸಕ್ತಿಯನ್ನು, ಏಕಾಗ್ರತೆಯನ್ನು ಮೂಡಿಸಲು ಇಂತಹ ಚಟುವಟಿಕೆಗಳನ್ನು ಆಯೋಜನೆ ಮಾಡುತ್ತಿರುವ ದೆಹಲಿ ಕನ್ನಡ ಶಿಕ್ಷಣ ಸಂಸ್ಥೆಯ ಕಾರ್ಯ ನಿಜಕ್ಕೂ ಮಾದರಿ ಎಂದು ಹೇಳಿದರು.

ನಾಲ್ಕನೇ ತರಗತಿಯಿಂದ 12ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಆಯೋಜಿಸಲ್ಪಟ್ಟ ಹದಿನಾಲ್ಕು ದಿವಸಗಳ ಈ ಮ್ಯಾಜಿಕ್ ಕಲಿಕಾ ತರಬೇತಿಯನ್ನು ಭಾರತೀಯ ಜಾದೂರಂಗದಲ್ಲಿ ವಿಶಿಷ್ಟ ಸ್ಥಾನ ಪಡೆದುಕೊಂಡ ಅಂತರರಾಷ್ಟ್ರೀಯ ಖ್ಯಾತಿಯ ಜಾದೂಗಾರರಾಗಿರುವ ಕುದ್ರೋಳಿ ಗಣೇಶ್ ಅವರು ನಡೆಸಿಕೊಡಲಿರುವರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ದೆಹಲಿ ಕನ್ನಡ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ವಸಂತ ಶೆಟ್ಟಿ ಬೆಳ್ಳಾರೆ ಅವರು ತರಬೇತಿಯ ಮೂಲೋದ್ದೇಶವನ್ನು ವಿವರಿಸುತ್ತಾ, ದೆಹಲಿ ಕನ್ನಡ ಶಿಕ್ಷಣ ಸಂಸ್ಥೆಯು ಸಂಸ್ಥೆಯ ಅಭಿವೃದ್ಧಿಯೊಂದಿಗೆ ವಿದ್ಯಾರ್ಥಿಗಳ ಮನೋವಿಕಾಸಕ್ಕೆ ಪೂರಕವಾದ ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸಿದೆ. ಕೊರೊನಾ ಕಾಲದ ಸಂಕಷ್ಟದಲ್ಲಿಯೂ ಕೂಡ ಈ ನಿರಂತರತೆಯನ್ನು ಕಾಯ್ದುಕೊಂಡು ಬರುತ್ತಿದೆ.  ಇದೀಗ ಆಡಳಿತ ಮಂಡಳಿಯ ಹಾಗೂ ದೆಹಲಿ ಕನ್ನಡಿಗರ ಸಹಕಾರದಿಂದ ಉಚಿತವಾಗಿ ಆಯೋಜಿಸಿದ ಈ ತರಬೇತಿಗೆ ಸುಮಾರು 400 ವಿದ್ಯಾರ್ಥಿಗಳು ಭಾಗವಹಿಸುತ್ತಿರುವುದು ಸಂತೋಷದ ವಿಚಾರ. ಮುಂದೆ ಈ ಮ್ಯಾಜಿಕ್ ಕಲಿಕೆಯನ್ನು ದೆಹಲಿ ಕನ್ನಡ ಶಿಕ್ಷಣ ಸಂಸ್ಥೆಯು ಶೈಕ್ಷಣಿಕ ವ್ಯಾಪ್ತಿಗೆ ಒಳಪಡಿಸುವ ಪ್ರಯತ್ನಕ್ಕೆ ಮುಂದಾಗುವುದು ಎಂದು ಹೇಳಿದರು.

ಜಾದೂ ಕಲಿಕಾ ಶಿಬಿರದ ಸಂಪನ್ಮೂಲ ವ್ಯಕ್ತಿಯಾದ ಖ್ಯಾತ ಜಾದೂಗಾರ ಕುದ್ರೋಳಿ ಗಣೇಶ್ ಇವರು ಮಾತನಾಡಿ ಜಾದೂ ಒಂದು ವೈಜ್ಞಾನಿಕ ಕಲೆಯಾಗಿದ್ದು ಜಾದೂ ಕಲೆಯಲ್ಲಿ ಅಡಕವಾಗಿರುವ ವಿಜ್ಞಾನ ಮತ್ತು ಕೈಚಳಕದ ತಂತ್ರಗಾರಿಕೆಗಳು ಮಕ್ಕಳ ಮನಸ್ಸನ್ನು ಚುರುಕುಗೊಳಿಸಿ ಅವರಲ್ಲಿರುವ ಬುದ್ದಿ ಮತ್ತೆಯನ್ನು ಅರಳಿಸುತ್ತದೆ. ಜಾದೂ ಕಲಿತ ಮಕ್ಕಳು ವೇದಿಕೆಯನ್ನೇರಿ ಜನರನ್ನು ಎದುರಿಸುವ ಆತ್ಮ ವಿಶ್ವಾಸ, ಪರಿಣಾಮಕಾರಿ ಮಾತನಾಡುವ  ಕಲೆ ಮುಂತಾದ ಸಾಮಾರ್ಥ್ಯವನ್ನು ಪಡೆದುಕೊಳ್ಳುತ್ತಾರೆ ಎಂದು ಅಭಿಪ್ರಾಯಪಟ್ಟರು. ಜಾದೂ ಕಲಿಕಾ ಶಿಬಿರದಲ್ಲಿ ವಿಜ್ಞಾನ ಮತ್ತು ಗಣಿತ ಆಧಾರಿತ ಹಲವು ತಂತ್ರಗಳನ್ನು ವಿದ್ಯಾರ್ಥಿಗಳಿಗೆ ಹೇಳಿಕೊಡಲಾಗುವುದು ಎಂದು ತಿಳಿಸಿದರು.

ಈ ಆನ್ ಲೈನ್ ಕಾರ್ಯಕ್ರಮದಲ್ಲಿ ಸಂಸ್ಥೆಯ ಕಾರ್ಯಕಾರಿ ಸಮಿತಿ ಸದಸ್ಯರು, ದೆಹಲಿ ಕನ್ನಡ ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು, ಪೋಷಕರು ಹಾಗೂ ದೆಹಲಿ ಕನ್ನಡಿಗರು ಪಾಲ್ಗೊಂಡಿದ್ದರು. ದೆಹಲಿ ಕನ್ನಡ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿಯ ಸಂಸ್ಥೆಯ ಗೌರವ ಕಾರ್ಯದರ್ಶಿ ಡಾ. ಎಂ. ಎಸ್. ಶಶಿಕುಮಾರ್ ಸ್ವಾಗತಿಸಿದರು. ದೆಹಲಿ ಕನ್ನಡ ಹಿರಿಯ ಮಾಧ್ಯಮಿಕ ಶಾಲೆಯ ಪ್ರಾಂಶುಪಾಲರಾದ ಪ್ರಶಾಂತ್ ಕುಮಾರ್ ವಂದಿಸಿದರು. ಶಿಕ್ಷಕರಾದ ಕುಮಾರಿ ಬಿದಿಶಾ ಕಾರ್ಯಕ್ರಮ ನಿರ್ವಹಿಸಿದರು.

ಬಳಿಕ ಪ್ರಸಿದ್ದ ಜಾದೂಗಾರ ಕುದ್ರೋಳಿ ಗಣೇಶ್ ಇವರು “ ವರ್ಚುವಲ್ ಮ್ಯಾಜಿಕ್ “ ಮೂಲಕ ಜನರನ್ನು ಬೆರಗುಗೊಳಿಸಿದರು.

Subscribe to our newsletter!

Other related posts

error: Content is protected !!