ಮ್ಯೂಕರ್ಮೈಕೊಸಿಸ್ ನಿಂದ ಸುರಕ್ಷಿತವಾಗಿರಿ

 ಮ್ಯೂಕರ್ಮೈಕೊಸಿಸ್ ನಿಂದ  ಸುರಕ್ಷಿತವಾಗಿರಿ
Share this post

ಮಧುಮೇಹ ನಿಯಂತ್ರಿಸಿ, ಸ್ಟಿರಾಯ್ಡ್ ಗಳನ್ನು ವಿವೇಚನೆಯಿಂದ ಬಳಸಿ, ಸ್ವಚ್ಛತೆ ಕಾಪಾಡಿ, ಸ್ವಯಂ-ಚಿಕಿತ್ಸೆ ಬೇಡ

ಕೆಲವು ಕೋವಿಡ್ ಸೋಂಕಿತರಲ್ಲಿ ಮ್ಯೂಕರ್ ಮೈಕೊಸಿಸ್ ಹೆಸರಿನ ಶಿಲೀಂಧ್ರ (ಫಂಗಸ್) ಸೋಂಕು ಇರುವುದು ವರದಿಯಾಗಿದೆ. ಸೋಂಕಿತರಿಗೆ ಚಿಕತ್ಸೆ ನೀಡುವಾಗ ಹಾಗೂ ಚೇತರಿಕೆ ನಂತರ ಇದು ಪತ್ತೆಯಾಗಿದೆ. ಎರಡು ದಿನಗಳ ಹಿಂದೆ ಮಹಾರಾಷ್ಟ್ರ ಆರೋಗ್ಯ ಸಚಿವರು ನೀಡಿರುವ ಹೇಳಿಕೆ ಪ್ರಕಾರ, 2 ಸಾವಿರಕ್ಕಿಂತ ಹೆಚ್ಚಿನ ಜನರಲ್ಲಿ ಈ ಸೋಂಕು ಕಾಣಿಸಿಕೊಂಡು, ಅವರ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದೆ. ಈಗಾಗಲೇ 10 ರೋಗಿಗಳು ಶಿಲೀಂಧ್ರ ಸೋಂಕಿಗೆ ಬಲಿಯಾಗಿದ್ದಾರೆ. ಕೆಲವು ರೋಗಿಗಳು ಈ ಸೋಂಕಿನಿಂದ ದೃಷ್ಟಿ ಕಳೆದುಕೊಂಡಿದ್ದಾರೆ.

ಮ್ಯೂಕರ್ಮೈಕೊಸಿಸ್ ಏನು ?

ಮ್ಯೂಕರ್ಮೈಕೊಸಿಸ್ ಅಥವಾ ಕಪ್ಪು ಶಿಲೀಂಧ್ರ ಸೋಂಕಿನ ಸಮಸ್ಯೆಯು ಫಂಗಲ್ ಇನ್ಫೆಕ್ಷನ್ ನಿಂದ ಕಾಣಿಸಿಕೊಳ್ಳುತ್ತದೆ. ವಾತಾವರಣದಲ್ಲಿ ಹರಡುವ ಶಿಲೀಂಧ್ರ ಬೀಜಕಣಗಳು ಜನರಿಗೆ ಹರಡಿ, ಅದರಿಂದ ಮ್ಯೂಕರ್ಮೈಕೊಸಿಸ್ ಸೋಂಕು ವ್ಯಾಪಿಸುತ್ತದೆ. ಶಿಲೀಂಧ್ರ ಬೀಜಕಣಗಳು ಮಾನವ ಚರ್ಮದ ಉಜ್ಜಿದ, ಸುಟ್ಟ, ಕೆರೆದ ಅಥವಾ ಗಾಯದ ಭಾಗ ಪ್ರವೇಶಿಸಿ, ಅಲ್ಲೇ ಅಭಿವೃದ್ಧಿಯಾಗುತ್ತವೆ.

ಕೋವಿಡ್-19 ಸೋಂಕಿನಿಂದ ಗುಣಮುಖರಾದವರು ಮತ್ತು ಗುಣಮುಖರಾಗುತ್ತಿರುವವರಲ್ಲಿ ಈ ಸೋಂಕು ಪತ್ತೆಯಾಗುತ್ತಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಮಧುಮೇಹ ರೋಗಿಗಳು ಮತ್ತು ಅವರ ರೋಗ ನಿರೋಧಕ ಶಕ್ತಿ ಸದೃಢವಾಗಿರದಿದ್ದರೆ, ಅಂಥವರು ಈ ಅಪಾಯಕಾರಿ ಸೋಂಕಿನ ವಿರುದ್ಧ ರಕ್ಷಿಸಿಕೊಳ್ಳಬೇಕು.

ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಹೊರಡಿಸಿರುವ ಸಲಹಾಸೂಚಿಯ ಪ್ರಕಾರ, ಕೆಳಗಿನ 5 ಅಂಶಗಳಿರುವ ಕೋವಿಡ್ ರೋಗಿಗಳಿಗೆ ಮ್ಯೂಕರ್ಮೈಕೊಸಿಸ್ ಸೋಂಕು ಹರಡುವ ಗಂಡಾತರ ಹೆಚ್ಚಿರುತ್ತದೆ.

  • ನಿಯಂತ್ರಣಕ್ಕೆ ಬಾರದ ಮಧುಮೇಹ
  • ಸ್ಟೆ(ಸ್ಟಿ)ರಾಯ್ಡ್ ಗಳ ವ್ಯಾಪಕ ಬಳಕೆಯಿಂದ ರೋಗ ನಿರೋಧಕ ಶಕ್ತಿ ದುರ್ಬಲವಾಗಿರುವ ಜನರು
  • ದೀರ್ಘಕಾಲ ಐಸಿಯು, ಆಸ್ಪತ್ರೆಗಳಲ್ಲಿ ವಾಸ್ತವ್ಯ ಕ್ಯಾನ್ಸರ್ ರೋಗಿಗಳು, ಅಸ್ವಸ್ಥರು ಮತ್ತು ಅಂಗಾಂಗ ಕಸಿ ಚಿಕಿತ್ಸೆಗೆ ಒಳಗಾದವರು.
  • ವೆರಿಕೊನಜೋಲ್ ಚಿಕಿತ್ಸೆ(ಗಂಭೀರ ಫಂಗಲ್ ಇನ್ಫೆಕ್ಷನ್ ಗಳಿಗೆ ಬಳಸುವ ಚಿಕಿತ್ಸಾ ವಿಧಾನಕ್ಕೆ ಒಳಗಾಗುವವರು)


ಕೋವಿಡ್-19 ಸೋಂಕಿಗೆ ಹೇಗೆ ಇದು ಸಂಬಂಧಿಸಿದೆ?

ಈ ರೋಗವು ಮ್ಯೂಕರ್ಮೈಸೆಟ್ಸ್ ಎಂಬ ಹೆಸರಿನಿಂದ ಕರೆಯಲ್ಪಡುವ ಅತಿಸೂಕ್ಷ್ಮ ಜೀವಿಗಳ ಗುಂಪಿನಿಂದ ಉಂಟಾಗುತ್ತದೆ. ಈ ಜೀವಿಗಳು ಪರಿಸರದಲ್ಲಿ ಸ್ವಾಭಾವಿಕವಾಗಿ ಇರುತ್ತವೆ. ಬಹುತೇಕ ಮಣ್ಣು ಮತ್ತು ಕೊಳೆಯುವ ಸಾವಯವ ಪದಾರ್ಥಗಳಾದ ಎಲೆ, ಗೊಬ್ಬರ ಮತ್ತು ಗುಡ್ಡೆಗಳಲ್ಲಿ ಕಂಡುಬರುತ್ತವೆ.

ಮಾನವನ ದೈನಂದಿನ ಸಾಮಾನ್ಯ ಜೀವನ ಬದುಕಿನಲ್ಲಿ ನಮ್ಮ ದೇಹದ ರೋಗ ನಿರೋಧಕ ಶಕ್ತಿಯು ಇಂತಹ ಶಿಲೀಂಧ್ರಗಳ ಸೋಂಕಿನ (ಫಂಗಲ್ ಇನ್ಫೆಕ್ಷನ್) ವಿರುದ್ಧ ಯಶಸ್ವಿಯಾಗಿ ಹೋರಾಡುತ್ತದೆ. ಆದಾಗ್ಯೂ, ಕೋವಿಡ್-19 ಸೋಂಕು ನಮ್ಮ ದೇಹದ ರೋಗ ನಿರೋಧಕ ವ್ಯವಸ್ಥೆಯ ಮೇಲೆ ಪರಿಣಾಮ ಬೀರುತ್ತಿದೆ ಎಂಬುದು ನಮಗೆಲ್ಲಾ ತಿಳಿದಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಕೋವಿಡ್ ಸೋಂಕಿತರಿಗೆ ನೀಡಲಾಗುತ್ತಿರುವ ಚಿಕಿತ್ಸೆಯಲ್ಲಿ ಡೆಕ್ಸಾಮೆಥನಾಸೋಲ್ ಔಷಧವನ್ನು ಬಳಸಲಾಗುತ್ತಿದೆ. ಇದು ನಮ್ಮ ರೋಗ ನಿರೋಧಕ ಶಕ್ತಿಯ ಸ್ಪಂದನೆಯನ್ನು ನಿಗ್ರಹಿಸುತ್ತದೆ. ಈ ಎಲ್ಲಾ ಅಂಶಗಳಿಂದಾಗಿ, ಕೋವಿಡ್ ಸೋಂಕಿತರು ಮ್ಯೂಕರ್ಮೈಸೆಟ್ಸ್ನಂತಹ ಅತಿ ಸೂಕ್ಷ್ಮ ಜೀವಿಗಳು ಒಡ್ಡುತ್ತಿರುವ ದಾಳಿಗಳನ್ನು ಎದುರಿಸುವ ಹೊಸ ಅಪಾಯವನ್ನು ಎದುರಿಸುತ್ತಿದ್ದು, ಅವುಗಳ ವಿರುದ್ಧ ಸಮರ್ಥವಾಗಿ ಹೋರಾಡಲು ವಿಫಲರಾಗುತ್ತಿದ್ದಾರೆ.

ಇದರ ಜತೆಗೆ, ಕೋವಿಡ್ ಸೋಂಕಿತರು ಐಸಿಯುಗಳಲ್ಲಿ ಆಮ್ಲಜನಕ ಚಿಕಿತ್ಸೆಗೆ ಒಳಗಾಗುತ್ತಿದ್ದಾರೆ. ಈ ಚಿಕಿತ್ಸೆಗೆ ತೇವಗೊಳಿಸುವ ಸಾಧನ ಹ್ಯುಮಿಡಿಫೈಯರ್ ಬಳಸಲಾಗುತ್ತದೆ. ಈ ಉಪಕರಣವು ತೇವಾಂಶಕ್ಕೆ ಒಡ್ಡಿಕೊಳ್ಳುವುದರಿಂದ ಫಂಗಲ್ ಇನ್ಫೆಕ್ಷನ್ ಸಾಧ್ಯತೆಗಳೇ ಹೆಚ್ಚು.

ಆದರೆ, ಪ್ರತಿಯೊಬ್ಬ ಕೋವಿಡ್ ಸೋಂಕಿತನಿಗೂ ಮ್ಯೂಕರ್ಮೈಕೊಸಿಸ್ ಸೋಂಕು ಹರಡುತ್ತದೆ ಎಂಬ ಅರ್ಥವಲ್ಲ. ಮಧುಮೇಹ ಇಲ್ಲದವರಲ್ಲಿ ಇದು ಪತ್ತೆಯಾಗಿಲ್ಲ. ಆದರೆ ಅವರ ಕೋವಿಡ್ ಸೋಂಕಿಗೆ ತ್ವರಿತವಾಗಿ ಚಿಕಿತ್ಸೆ ಒದಗಿಸುವುದು ಅತ್ಯಗತ್ಯ. ಕೋವಿಡ್ ಸೋಂಕಿತರು ವಿಳಂಬ ಮಾಡದೆ ಚಿಕಿತ್ಸೆ ಪಡೆಯುವುದರಿಂದ ಮ್ಯೂಕರ್|ಮೈಕೊಸಿಸ್|ನಂತಹ ಸೋಂಕುಗಳಿಂದ ಪಾರಾಗಬಹುದು. ಗುಣಮುಖ ಸಾಧ್ಯತೆಯು ತ್ವರಿತ ರೋಗ ಪತ್ತೆ ಮತ್ತು ಚಿಕಿತ್ಸೆಯನ್ನು ಅವಲಂಬಿಸಿದೆ.

ಸಾಮಾನ್ಯ ರೋಗ ಲಕ್ಷಣಗಳೇನು?

ಮ್ಯೂಕರ್ಮೈಕೊಸಿಸ್ ಆರಂಭದಲ್ಲಿ ನಮ್ಮ ಹಣೆ, ಮೂಗು, ಕೆನ್ನೆ, ಕಣ್ಣು, ಹಲ್ಲುಗಳು ಮತ್ತು ಗಲ್ಲದ ಎಲುಬುಗಳಲ್ಲಿರುವ ಸೂಕ್ಷ್ಮಾತಿಸೂಕ್ಷ್ಮ ವಾಯು ಪದರಗಳಲ್ಲಿ ಸೋಂಕಾಗಿ ಶುರುವಾಗುತ್ತದೆ. ಅದು ನಂತರ ಕಣ್ಣು, ಶ್ವಾಸಕೋಶ ಹಾಗೂ ಮೆದುಳಿಗೆ ವ್ಯಾಪಿಸುತ್ತದೆ. ಇದು ಮೂಗಿನ ಮೇಲಿನ ಬಣ್ಣ ಬದಲಿಸಿ, ವಿರೂಪಗೊಳಿಸುವ ಜತೆಗೆ ಕಣ್ಣಿನ ದೃಷ್ಟಿ ಮಂಕಾಗಿಸುತ್ತದೆ ಅಥವಾ ಜೋಡಿ ದೃಷ್ಟಿಗೆ ಕಾರಣವಾಗುತ್ತದೆ. ಎದೆನೋವು, ಉಸಿರಾಟ ಸಮಸ್ಯೆ ಮತ್ತು ರಕ್ತದ ಕೆಮ್ಮಿಗೂ ಕಾರಣವಾಗುತ್ತದೆ.

ಕೋವಿಡ್-19 ಸೋಂಕಿತರಿಗೆ ಚಿಕಿತ್ಸೆ ನೀಡುವಾಗ ಅಥವಾ ಚಿಕಿತ್ಸೆ ನಂತರ ಕಟ್ಟಿದ ಮೂಗಿನ ಎಲ್ಲಾ ಪ್ರಕರಣಗಳನ್ನು ‘ಬ್ಯಾಕ್ಟೀರಿಯಾ ಸೋಂಕಿನ ಸೈನಸೈಟಿಸ್’ ಪ್ರಕರಣಗಳೆಂದು ಪರಿಗಣಿಸಬಾರದು ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ ಐಸಿಎಂಆರ್ ಸಲಹೆ ನೀಡಿದೆ. ಫಂಗಲ್ ಇನ್ಪೆಕ್ಷನ್ ಪತ್ತೆ ಮಾಡಲು ಪ್ರತಿಯೊಬ್ಬರೂ ವೈದ್ಯಕೀಯ ನೆರವು ಪಡೆಯಬೇಕು ಎಂದು ಅದು ತಿಳಿಸಿದೆ.

ಇದಕ್ಕೆ ಚಿಕಿತ್ಸೆ ಹೇಗೆ?

ಮ್ಯೂಕರ್ಮೈಕೊಸಿಸ್ ಶಿಲೀಂಧ್ರ ಸೋಂಕು ಚರ್ಮ ರೋಗವಾಗಿ ಆರಂಭವಾಗಿದೆ. ಇದು ದೇಹದ ಇತರೆ ಭಾಗಗಳಿಗೂ ಹರಡಬಹುದು. ಚರ್ಮದ ಮೇಲೆ ಹರಡಿರುವ ಎಲ್ಲಾ ಸೋಂಕಿತ ಮತ್ತು ಸತ್ತ ಜೀವಕೋಶಗಳನ್ನು ಶಸ್ತ್ರಚಿಕಿತ್ಸೆ ಮೂಲಕ ತೆಗೆದುಹಾಕಲಾಗುತ್ತದೆ. ಇದರ ಫಲವಾಗಿ ಕೆಲವು ರೋಗಿಗಳು ಮೇಲಿನ ದವಡೆ ಕಳೆದುಕೊಳ್ಳುವ ಮತ್ತು ಕೆಲವು ಸಂದರ್ಭಗಳಲ್ಲಿ ಕಣ್ಣನ್ನು ಕಳೆದುಕೊಳ್ಳಬೇಕಾದ ಅಪಾಯವಿರುತ್ತದೆ. ರೋಗಿ ಗುಣಮುಖನಾಗಲು 4-6 ವಾರಗಳ ಕಾಲಾವಕಾಶ ಬೇಕಾಗುತ್ತದೆ. ಶಿಲೀಂಧ್ರ ಸೋಂಕು-ಪ್ರತಿಬಂಧಕ ಅಭಿಧಮನಿ ಚಿಕಿತ್ಸೆ ನೀಡಲಾಗುತ್ತದೆ. ಮ್ಯೂಕರ್ಮೈಕೊಸಿಸ್ ಶಿಲೀಂಧ್ರ ಸೋಂಕು ಮಾನವ ದೇಹದ ವಿವಿಧ ಅಂಗಾಂಗಗಳಿಗೆ ವ್ಯಾಪಿಸುವ ಅಪಾಯಗಳಿರುವುದರಿಂದ ಸೂಕ್ಷ್ಮ ಜೀವಶಾಸ್ತ್ರಜ್ಞರು, ಔಷಧ ತಜ್ಞ ವೈದ್ಯರು, ನರರೋಗ ತಜ್ಞರು, ಇಎನ್‌ಟಿ ತಜ್ಞರು, ನೇತ್ರಶಾಸ್ತ್ರಜ್ಞರು, ದಂತವೈದ್ಯರು, ಶಸ್ತ್ರಚಿಕಿತ್ಸಕರು ಒಳಗೊಂಡ ತಂಡವೇ ಚಿಕಿತ್ಸೆಯಲ್ಲಿ ತೊಡಗಿಕೊಂಡಿರುತ್ತದೆ.

ಐಸಿಎಂಆರ್ ನೀಡಿರುವ ಸಲಹೆಯಂತೆ, ಮಧುಮೇಹ ನಿಯಂತ್ರಣವೇ ಸೋಂಕು ತಡೆಗಟ್ಟಲು ಇರುವ ಪ್ರಮುಖ ವಿಧಾನವಾಗಿದೆ. ಹಾಗಾಗಿ, ಮಧುಮೇಹ ಇರುವ ಕೋವಿಡ್ ಸೋಂಕಿತರು ಅತ್ಯಂತ ಎಚ್ಚರಿಕೆಯಿಂದ ಇರಬೇಕು.

ಸ್ವಯಂ ಔಷಧ ಚಿಕಿತ್ಸೆ ಮತ್ತು ಅತಿಯಾದ ಸ್ಟೆರಾಯ್ಡ್ ಬಳಕೆಯು ಮಾರಣಾಂತಿಕ ಘಟನೆಗಳಿಗೆ ಕಾರಣವಾಗಬಹುದು. ಆದ್ದರಿಂದ ವೈದ್ಯರ ಸಲಹೆ ಸೂಚನೆ ಮತ್ತು ಚಿಕಿತ್ಸೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಸ್ಟೆರಾಯ್ಡ್|ಗಳ ಮಿತಿಮೀರಿದ ಬಳಕೆಯ ವ್ಯತಿರಿಕ್ತ ಪರಿಣಾಮಗಳ ಕುರಿತು ಮಾತನಾಡಿರುವ ನೀತಿ ಆಯೋಗದ ಆರೋಗ್ಯ ವಿಭಾಗದ ಸದಸ್ಯ ಡಾ. ವಿ.ಕೆ. ಪಾಲ್, “ಕೋವಿಡ್-19 ಸೋಂಕು ಕಾಣಿಸಿಕೊಂಡ ಆರಂಭದಲ್ಲಿ ಸ್ಟೆರಾಯ್ಡ್|ಗಳನ್ನು ಯಾವುದೇ ಕಾರಣಕ್ಕೂ ಬಳಸಬಾರದು. ಸೋಂಕು ಕಾಣಿಸಿಕೊಂಡ ಆರು ದಿನಗಳ ನಂತರ ಮಾತ್ರ ತೀರಾ ಅಗತ್ಯ ಎನಿಸಿದರೆ ಮಾತ್ರ ಬಳಸಬೇಕು. ರೋಗಿಗಳು ಸೂಕ್ತ ಔಷಧಗಳ ಡೋಸ್ ಪಡೆಯಲು ಅಂಟಿಕೊಳ್ಳಬೇಕು. ವೈದ್ಯರು ಸೂಚಿಸುವಂತೆ ನಿರ್ದಿಷ್ಟ ದಿನಗಳವರೆಗೆ ಮಾತ್ರ ಔಷಧ ಪಡೆಯಬೇಕು. ಔಷಧಗಳ ಅಡ್ಡ ಪರಿಣಾಮಗಳ ವ್ಯತಿರಿಕ್ತ ಪರಿಣಾಮಗಳನ್ನು ತಡೆಯಲು, ಔಷಧಗಳ ತರ್ಕಬದ್ಧ ಬಳಕೆಯನ್ನು ಖಚಿತಪಡಿಸಬೇಕು” ಎಂದು ಸಲಹೆ ನೀಡಿದ್ದಾರೆ.

“ಸ್ಟಿರಾಯ್ಡ್|ಗಳನ್ನು ಹೊರತುಪಡಿಸಿ, ಕೋವಿಡ್-19 ವಾಸಿಗೆ ಬಳಸುವ ಟಾಸಿಲಿಝುಮಾಬ್, ಇಟಾಲಿಝುಮಾಬ್ ಔಷಧಗಳು ಸಹ ದೇಹದ ರೋಗ ನಿರೋಧಕ ಶಕ್ತಿಯನ್ನು ನಿಗ್ರಹಿಸುತ್ತವೆ. ಈ ಔಷಧಗಳನ್ನು ಸಮರ್ಪಕ ಪ್ರಮಾಣದಲ್ಲಿ ಬಳಸದಿದ್ದರೆ, ಇವು ನಮಗೆ ಗಂಡಾಂತರಗಳನ್ನು ಹೆಚ್ಚಿಸಿ, ಫಂಗಲ್ ಇನ್ಫೆಕ್ಷನ್ ವಿರುದ್ಧ ಹೋರಾಡಲು ವಿಫಲವಾಗುತ್ತವೆ” ಎನ್ನುತ್ತಾರೆ ಡಾ. ವಿ.ಕೆ. ಪಾಲ್.

ಇಮ್ಯುನೊ ಮಾಡ್ಯುಲೇಟಿಂಗ್ ಔಷಧಗಳು ದೇಹದ ರೋಗ ನಿರೋಧಕ ಶಕ್ತಿಯ ವ್ಯವಸ್ಥೆಯನ್ನು ಉತ್ತೇಜಿಸುತ್ತವೆ ಅಥವಾ ನಿಗ್ರಹಿಸುತ್ತವೆ. ಇಂತಹ ಪ್ರತೀಕೂಲ ಪರಿಣಾಮಗಳನ್ನು ತಡೆಯುವ ಉದ್ದೇಶದಿಂದ ರಾಷ್ಟ್ರೀಯ ಕೋವಿಡ್-19 ಕಾರ್ಯಪಡೆಯು ಟಾಸಿಲಿಝುಮಾಬ್ ಲಸಿಕೆಯ ಡೋಸ್ ಪ್ರಮಾಣವನ್ನು ಪರಿಷ್ಕರಿಸಿದೆ. ಶಿಲೀಂಧ್ರ ಸೋಂಕನ್ನು ಪರಿಣಾಮಕಾರಿಯಾಗಿ ತಡೆಯಬೇಕಾದರೆ ಸ್ವಚ್ಛತೆ ಕಾಪಾಡುವುದು ಅತಿಮುಖ್ಯ ಮತ್ತು ಸಹಕಾರಿಯಾಗಲಿದೆ.

ಆಮ್ಲಜನಕ ಚಿಕಿತ್ಸೆ ಪಡೆಯುವ ಕೋವಿಡ್ ಸೋಂಕಿತರು, ಹ್ಯುಮಿಡಿಫೈಯರ್ನಲ್ಲಿರುವ ನೀರು ಸ್ವಚ್ಛವಾಗಿರುವುದನ್ನು ಮತ್ತು ನಿಯಮಿತವಾಗಿ ಭರ್ತಿ ಮಾಡುವುದನ್ನು ಖಚಿತಪಡಿಸಿಕೊಳ್ಳಬೇಕು. ಹ್ಯುಮಿಡಿಫೈಯರ್ ನಿಂದ ನೀರು ಸೋರಿಕೆ ಆಗದಂತೆ ಗಮನ ಹರಿಸಬೇಕು. ಏಕೆಂದರೆ, ನೀರು ಸೋರಿಕೆ ಆಗುವ ಜಾಗದಲ್ಲಿ ಶಿಲೀಂಧ್ರ ಸೋಂಕು ಉತ್ಪತ್ತಿಯಾಗುವ ಸಂಭವವಿರುತ್ತದೆ. ರೋಗಿಗಳು ತಮ್ಮ ದೇಹ ಮತ್ತು ಕೈಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು.

ಕೋವಿಡ್ ನಿಂದ ಚೇತರಿಸಿಕೊಂಡ ನಂತರವೂ ಜಾಗರೂಕರಾಗಿರಿ

ಕೋವಿಡ್-19 ಸೋಂಕಿನಿಂದ ಗುಣಮುಖರಾದ ನಂತರವೂ ಜಾಗರೂಕರಾಗಿರಿ. ಮೇಲೆ ನೀಡಿರುವ ಮುಂಜಾಗ್ರತಾ ಕ್ರಮಗಳ ಮೇಲೆ ಪ್ರತಿಯೊಬ್ಬರೂ ನಿಗಾ ವಹಿಸಿ, ಸೂಕ್ತ ರೀತಿಯಲ್ಲಿ ಪಾಲಿಸಬೇಕು. ಏಕೆಂದರೆ, ಕೋವಿಡ್ ನಿಂದ ಗುಣಮುಖರಾದ ಕೆಲವು ವಾರಗಳು ಅಥವಾ ತಿಂಗಳುಗಳ ನಂತರ ಫಂಗಲ್ ಇನ್ಫೆಕ್ಷನ್ ಕಾಡುವ ಎಲ್ಲಾ ಸಾಧ್ಯತೆಗಳಿವೆ. ಸೋಂಕಿನ ಗಂಡಾಂತರಗಳಿಂದ ತಪ್ಪಿಸಿಕೊಳ್ಳಲು ವೈದ್ಯರ ಸಲಹೆಯಂತೆ, ಪ್ರತಿಯೊಬ್ಬರೂ ಸ್ಟಿರಾಯ್ಡ್ ಗಳನ್ನು ತರ್ಕಬದ್ಧವಾಗಿ ಬಳಸಬೇಕು. ಫಂಗಲ್ ಇನ್ಫೆಕ್ಷನ್ ಅನ್ನು ಸೋಂಕಿನ ಲಕ್ಷಣ ಕಾಣಿಸಿಕೊಂಡ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಪತ್ತೆ ಮಾಡಿದರೆ, ಚಿಕಿತ್ಸೆ ಸುಲಭವಾಗುತ್ತದೆ.

Subscribe to our newsletter!

Other related posts

error: Content is protected !!