ನಾಳೆ ಸಾರಿಗೆ ನಿಗಮಗಳಿಂದ ವಿಶೇಷ ಹೆಚ್ಚುವರಿ ಬಸ್ ವ್ಯವಸ್ಥೆ: ಸವದಿ
ಬೆಂಗಳೂರು, ಏಪ್ರಿಲ್ 26, 2021: ನಾಳೆಯಿಂದ ಕರ್ಫ್ಯೂ ಮತ್ತು ಲಾಕ್ಡೌನ್ ಬಿಗಿಗೊಳಿಸಿರುವುದರಿಂದ ಗಮನಾರ್ಹ ಸಂಖ್ಯೆಯ ಸಾರ್ವಜನಿಕರು ತಮ್ಮತಮ್ಮ ಊರುಗಳಿಗೆ ತೆರಳಲು ಅನುಕೂಲವಾಗುವಂತೆ ಸಾರಿಗೆ ನಿಗಮಗಳಿಂದ ಸಾರ್ವಜನಿಕರ ಬೇಡಿಕೆಗಳಿಗೆ ಅನುಗುಣವಾಗಿ12 ಸಾವಿರಕ್ಕೂ ಹೆಚ್ಚು ಬಸ್ಸುಗಳನ್ನು ವ್ಯವಸ್ಥೆ ಮಾಡಲಾಗಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಸಾರಿಗೆ ಸಚಿವ ಲಕ್ಷ್ಮಣ್ ಸವದಿ ತಿಳಿಸಿದ್ದಾರೆ.
ಈ ಬಸ್ಸುಗಳು ಬೆಂಗಳೂರಿನಿಂದ ಹೊರಗಡೆ ಮತ್ತು ಬೇರೆ ಬೇರೆ ಪ್ರದೇಶಗಳಿಂದ ಬೆಂಗಳೂರಿಗೆ ಮತ್ತು ಇತರ ಪ್ರದೇಶಗಳಿಗೆ ಸಂಚರಿಸಲಿವೆ .
ನಾಳೆ ರಾತ್ರಿಯ ನಿಗದಿತ ಕರ್ಫ್ಯೂ ಸಮಯದ ಒಳಗೆ ಸಂಚರಿಸಲಿರುವ ಬಸ್ಸುಗಳ ಈ ವಿಶೇಷ ವ್ಯವಸ್ಥೆಯನ್ನು ಸಾರ್ವಜನಿಕರು ಸದುಪಯೋಗಪಡಿಸಿಕೊಳ್ಳಬೇಕೆoದು ಅವರು ಸಾರ್ವಜನಿಕರಲ್ಲಿ ವಿನಂತಿ ಮಾಡಿಕೊಂಡಿದ್ದಾರೆ.
ನಾಳೆ ರಾತ್ರಿಯ ಒಳಗೆ ತಮ್ಮ ಸ್ಥಳಕ್ಕೆ ತಲುಪಬೇಕಾದ ಪ್ರಯಾಣಿಕರು ಯಾವುದೇ ಆತಂಕವಿಲ್ಲದೆ, ನಿಗದಿತ ಕೋವಿಡ್ ಮಾರ್ಗಸೂಚಿ ಅನ್ವಯ ಮುಂಜಾಗ್ರತೆ ವಹಿಸಿ ಈ ಸಾರಿಗೆ ವ್ಯವಸ್ಥೆಯನ್ನು ಸೂಕ್ತವಾಗಿ ಬಳಸಿಕೊಳ್ಳಬಹುದಾಗಿದೆ ಎಂದು ಅವರು ಹೇಳಿದ್ದಾರೆ.