ಶ್ರೀ ಮಂಗಳಾದೇವಿಗೆ ಶತ ರುದ್ರಾಭಿಷೇಕ
ಮಂಗಳೂರು, ಏಪ್ರಿಲ್ 1, 2021: ವರ್ಷಾವಧಿ ಜಾತ್ರಾ ಉತ್ಸವದ ಪ್ರಯುಕ್ತ ಶ್ರೀ ಮಂಗಳಾದೇವಿಗೆ ಇಂದು ಪ್ರಾತಃಕಾಲ ಶತ ರುದ್ರಾಭಿಷೇಕ ನೆರವೇರಿತು.
ಕೃಷ್ಣ ಯಜುರ್ವೇದ ತೈತ್ತಿರೀಯ ಸಂಹಿತೆಯ ನಾಲ್ಕನೆಯ ಕಾಂಡದಲ್ಲಿ ಬರುವ ‘ರುದ್ರಾಧ್ಯಾಯದ ರುದ್ರ ನಮಕ’ ಹಾಗೂ ‘ರುದ್ರ ಚಮಕ’ ಮಹಾ ಮಂತ್ರಗಳ ಪಠಣದೊಂದಿಗೆ ಮುಖ ಮಂಟಪದಿ ೧೧’ಮಂದಿ ವಿಪ್ರೋತ್ತಮರಿಂದ ರುದ್ರ ಪಠಣದ ನೂರು ಆವರ್ತನ ಸಹಿತ ಶತ ರುದ್ರಾಭಿಷೇಕವು ಶ್ರೀ ದೇವಿಗೆ ನಡೆಯಿತು.
ರುದ್ರ ನಮಕ-ಚಮಕಗಳು ಲೋಕಹಿತಂಕರನಾದ ಶ್ರೀ ಪರಶಿವನ ಪರಮ ಶ್ರೇಷ್ಠತೆಯನ್ನು ಪ್ರತಿಪಾದಿಸುತ್ತವೆ. ರುದ್ರಪಾರಾಯಣ ಮಾಡುವ ಸರ್ವರಿಗೂ ಶಿವಾನುಗ್ರಹವಾಗುವಂತೆ ಮಾಡಿ ಸಂಪೂರ್ಣ ಬದುಕನ್ನು ಶಿವಮಯಗೊಳಿಸುವ ಶಕ್ತಿಯಿದ್ದು ಶೃದ್ಧಾ ಭಕ್ತಿಯಿಂದ ಪೂಜಿಸಿ ಪ್ರಾರ್ಥಿಸಿದಲ್ಲಿ ಜನರನ್ನು ಸಕಲ ಸಂಕಷ್ಟದಿಂದ ಪಾರುಮಾಡಿ, ಸೌಭಾಗ್ಯ ಸಹಿತ ಮನೋಭೀಷ್ಟೆಯ ಕೊಟ್ಟು ಆಶೀರ್ವದಿಸುವನು ಎಂಬ ನಂಬಿಕೆ ಇದೆ.
ಅಭಿಷೇಕದ ಮುಖೇನ ‘ಕೃಷ್ಣ ಯಜುರ್ವೇದ ತೈತ್ತಿರೀಯ ಸಂಹಿತೆ’ ಯ ನಾಲ್ಕನೆಯ ಕಾಂಡದಲ್ಲಿನ ಪ್ರಕಾರವಾದ ‘ರುದ್ರ ನಮಕ’ ಹಾಗೂ ‘ ರುದ್ರ ಚಮಕ’ ಗಳನ್ನು ಅಭಿಷೇಕದ ಸಂದರ್ಭದಲ್ಲಿ ಪಠಿಸುತ್ತಾ ಬಿಲ್ವಪತ್ರೆಗಳ ಸಮರ್ಪಣೆಯೊಂದಿಗೆ ಅಭಿಷೇಕ ಪ್ರಿಯನಾದ ಶಿವ ದೇವರನ್ನು ಆರಾಧಿಸಲಾತ್ತದೆ.
ಅದೇ ಪ್ರಕಾರವಾಗಿ ಭಕ್ತರ ಮನೋಭಿಷ್ಟಗಳನ್ನು ನೆರವೇರಿಸಿ ಕೊಡುವ ಸಪತ್ನೀ ಸಮೇತ ನೆಲೆನಿಂತ ರುದ್ರ ಸ್ವರೂಪಿ ಮಂಜುನಾಥನ ಸಹಿತ ಬಿಂಬರೂಪದಿ ಶತ ರುದ್ರಾಭಿಷೇಕ ಸೇವೆಯನ್ನು ಸಂತೋಷದಿಂದ ಸ್ವೀಕರಿಸಿ ಪರಮೇಶ್ವರಿಯು ಪ್ರಸನ್ನಳಾಗಿ ಇಷ್ಟಾರ್ಥಗಳನ್ನು ಅನುಗ್ರಹಿಸುವಳು ಎಂಬ ನಂಬಿಕೆ ಭಕ್ತರದ್ದು.