ಟ್ರೇಡ್ ಲೈಸನ್ಸ್ ಪಡೆಯಲು ಸೂಚನೆ
ಕಾರವಾರ ಮಾ. 23, 2021: ನಗರಸಭೆ ವ್ಯಾಪ್ತಿಯಲ್ಲಿ ಬರುವ ಅಂಗಡಿ, ವಾಣಿಜ್ಯ ಉದ್ದಿಮೆಯ ಲೈಸನ್ಸ್ನ್ನು ಪಡೆಯದೇ ಈ ವರೆಗೆ ನವೀಕರಿಸಿಕೊಳ್ಳದೇ ವ್ಯವಹಾರ ಮಾಡುವವರು ಲೈಸನ್ಸ ಪಡೆಯಬೇಕು ಹಾಗೂ ನವೀಕರಣವಿದ್ದಲ್ಲಿ ನವೀಕರಿಸಿಕೊಳ್ಳಬೇಕೆಂದು ಕಾರವಾರ ನಗರಸಭೆ ಪೌರಾಯುಕ್ತ ಆರ್.ಪಿ. ನಾಯ್ಕ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಾಣಿಜ್ಯ ಉದ್ದಿಮೆ ಮತ್ತು ಅಂಗಡಿಗಳ ಲೈಸನ್ಸ್ ನವೀಕರಿಸದೇ ಹಾಗೂ ಹೊಸ ಲೈಸನ್ಸ್ ಪಡೆಯದೇ ಉದ್ದಿಮೆ ನಡೆಸುತ್ತಿರುವುದು ನಗರಸಭೆ ಕಾರ್ಯಾಲಯದ ಗಮನಕ್ಕೆ ಬಂದಿದೆ. ಹೀಗಾಗಿ ನಗರಸಭೆ ವ್ಯಾಪ್ತಿಯಲ್ಲಿ ಉದ್ದಿಮೆ ನಡೆಸುವ ಪ್ರತಿಯೊಬ್ಬ ಉದ್ದಿಮೇದಾರರೂ ಈ ಆದೇಶ ಪ್ರಕಟಗೊಂಡ 3 ದಿನಗೊಳಗಾಗಿ ಅಂಗಡಿ, ವಾಣಿಜ್ಯ ಉದ್ದಿಮೆಯ ಲೈಸನ್ಸ್ ಇಲ್ಲದೆ ನವೀಕರಿಸದೇ ವ್ಯವಹಾರ ನಡೆಸುತ್ತಿರುವವರು ಶುಲ್ಕವನ್ನು ದಂಡದೊಂದಿಗೆ ಸಂದಾಯ ಮಾಡಿ ದಾಖಲಾತಿಗಳೊಂದಿಗೆ ಅರ್ಜಿ ನಮೂನೆ ಸಲ್ಲಿಸಿ ಲೈಸನ್ಸ ಪಡೆಯಬೇಕು ಹಾಗೂ ನವೀಕರಿಸಿಕೊಳ್ಳತಕ್ಕದ್ದು.
ಲೈಸನ್ಸ ಪಡೆಯದೇ ಅಥವಾ ನವೀಕರಿಸದೇ ಇರುವವರ, ಅಂಗಡಿ ಮುಂಗಟ್ಟುಗಳನ್ನು ಯಾವುದೇ ನೋಟಿಸ್ ನೀಡದೇ ಸ್ಥಗಿತಗೊಳಿಸಿ ಕಾಯ್ದೆ 1964ರ 256 ಕಲಂ ಅಡಿಯಲ್ಲಿ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅವರು ಹೇಳಿದ್ದಾರೆ.