ಕಬ್ಬಿನಾಲೆಯಲ್ಲಿ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ: 119 ಅರ್ಜಿ ವಿಲೇವಾರಿ

 ಕಬ್ಬಿನಾಲೆಯಲ್ಲಿ ಜಿಲ್ಲಾಧಿಕಾರಿಗಳ ಗ್ರಾಮ ವಾಸ್ತವ್ಯ: 119 ಅರ್ಜಿ ವಿಲೇವಾರಿ
Share this post

ಉಡುಪಿ ಮಾರ್ಚ್ 20, 2021: ಶನಿವಾರ ಹೆಬ್ರಿ ತಾಲೂಕಿನ ಕಬ್ಬಿನಾಲೆಯಲ್ಲಿ ನಡೆದ ಜಿಲ್ಲಾಧಿಕಾರಿ ಜಿ.ಜಗದೀಶ್ ಅವರ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಸಾರ್ವಜನಿಕರಿಂದ 119 ಅರ್ಜಿಗಳನ್ನು ಸ್ವೀಕರಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಲ್ಲಾಧಿಕಾರಿ ಜಿ.ಜಗದೀಶ್, ಜಿಲ್ಲೆಯಲ್ಲಿ ನಡೆಯುತ್ತಿರುವ 3 ನೇ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಇದಾಗಿದ್ದು, ಜಿಲ್ಲಾ ಕೇಂದ್ರದಿಂದ ಅತ್ಯಂತ ದೂರದಲ್ಲಿದ್ದು, ವಿವಿಧ ಸರ್ಕಾರಿ ಸೌಲಭ್ಯಗಳಿಗಾಗಿ ಜಿಲ್ಲಾ ಮತ್ತು ತಾಲೂಕು ಕಚೇರಿಗಳಿಗೆ ಬರಲು ಕಷ್ಟವಾಗುವ ಗ್ರಾಮಸ್ಥರ ಸಮಸ್ಯೆಗಳನ್ನು ಸ್ಥಳಕ್ಕೆ ತೆರಳಿ ಬಹೆಗರಿಸಲಾಗುತ್ತಿದ್ದು, ಸ್ಥಳೀಯ ಸಮಸ್ಯೆಗಳನ್ನು ಇಲ್ಲಿಯೇ ಬಗೆಹರಿಸಿ, ಸರ್ಕಾರದಿಂದ ಬಗೆಹರಿಸಬಹುದಾದ ಸಮಸ್ಯೆಗಳನ್ನು ಸರ್ಕಾರದ ಗಮನಕ್ಕೆ ತಂದು  ಸಾರ್ವಜನಿಕರಿಗೆ ಅಗತ್ಯ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಹೇಳಿದರು.

ಕಬ್ಬಿನಾಲೆ, ನಾಡ್ಪಾಲು ಸೇರಿದಂತೆ ಹೆಬ್ರಿ ಮತ್ತು ಕಾರ್ಕಳ ತಾಲೂಕಿನ 11 ಗ್ರಾಮಗಳಲ್ಲಿ ಹುಲಿ ಯೋಜನೆ ಮತ್ತು ಕಸ್ತೂರಿ ರಂಗನ್ ವರದಿ ಅನುಷ್ಠಾನ ಕುರಿತಂತೆ ಸಾರ್ವಜನಿಕರಿಗೆ ಒಕ್ಕಲೆಬ್ಬಿಸುವ  ಭಯ ಇದೆ. ಡೀಮ್ಡ್ ಫಾರೆಸ್ಟ್ ಸಮಸ್ಯೆಯಿಂದ ವಸತಿ, ರಸ್ತೆ ಸೇರಿದಂತೆ ವಿವಿಧ ಅಭಿವೃದ್ಧಿ ಕಾರ್ಯ ಕೈಗೊಳ್ಳಲು ಸಮಸ್ಯೆಯಿದೆ. ಈ ಬಗ್ಗೆ ಅಗತ್ಯ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡುವಂತೆ  ಜಿಲ್ಲಾ ಪಂಚಾಯತ್‌ನ ಮಾಜಿ ಸದಸ್ಯ ಮಂಜುನಾಥ ಪೂಜಾರಿ ಕೋರಿದರು.

ಕಸ್ತೂರಿ ರಂಗನ್ ವರದಿಯನ್ನು ಜಾರಿ ಮಾಡುವುದಿಲ್ಲ ಎಂದು ರಾಜ್ಯದ ಕ್ಯಾಬಿನೆಟ್‌ನಲ್ಲಿ ನಿರ್ಧಾರ ಆಗಿದೆ. ಇಲ್ಲಿನ ವಿವಿಧ ಸಮಸ್ಯೆಗಳ ಕುರಿತಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಡೀಮ್ಡ್ ಫಾರೆಸ್ಟ್  ಯೋಜನೆಯ ಕುರಿತಂತೆ ಕೆಲವು ಸರ್ವೇ ನಂಬರ್‌ಗಳನ್ನು ವಿನಾಯತಿ ಮಾಡುವಂತೆ ಈಗಾಗಲೇ ರಾಜ್ಯ ಸರ್ಕಾರದಿಂದ ಸುಪ್ರೀಂ ಕೋರ್ಟ್ಗೆ ಅಫಿಡವಿಟ್ ಸಲ್ಲಿಸಿದ್ದು, ಸುಪ್ರೀಂ ಕೋರ್ಟ್ ಅನುಮತಿ ನೀಡಿದ ನಂತರ ಆ ಸರ್ವೇ ನಂಬರ್‌ಗಳಿಗೆ ಸಂಬAಧಿಸಿದಂತೆ ಹಕ್ಕುಪತ್ರ ವಿತರಣೆ, ನಿವೇಶನ ನಿರ್ಮಾಣಕ್ಕೆ ಅನುಮತಿ ನೀಡಲು ಸಾಧ್ಯವಾಗಲಿದೆ. ಹುಲಿ ಯೋಜನೆ ಕುರಿತಂತೆ ಜಿಲ್ಲಾಡಳಿತದ ಮೂಲಕ ಯಾವುದೇ ಕಾರ್ಯಕ್ರಮ ರೂಪಿಸಿಲ್ಲ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಸ್ಪಷ್ಟಪಡಿಸಿದರು.

ಕೊಂಕಣಾರಬೆಟ್ಟು ಶಾಲೆಯ ಕಾಂಪೌಂಡ್ ಕುಸಿತದ ಬಗ್ಗೆ ಸಲ್ಲಿಸಿದ ಅರ್ಜಿ ಕುರಿತಂತೆ ಜಿಲ್ಲೆಯ ಎಲ್ಲಾ ಶಾಲೆ, ಅಂಗನವಾಡಿಗಳ ದುರಸ್ತಿಗೆ 2 ಲಕ್ಷ ರೂ. ಪ್ರಾಕೃತಿಕ ವಿಕೋಪ ನಿಧಿಯಡಿ ಬಿಡುಗಡೆಗೊಳಿಸಲಾಗುತ್ತಿದ್ದು, ಕಾಂಪೌಂಡ್ ನಿರ್ಮಾಣಕ್ಕೆ ಹೆಚ್ಚಿನ ಅನುದಾನ ಅಗತ್ಯವಿದ್ದಲ್ಲಿ ಪ್ರಸ್ತಾವನೆ ಸಲ್ಲಿಸುವಂತೆ ಪಿಆರ್‌ಇಡಿ ಇಂಜಿನಿಯರ್‌ಗೆ ಸೂಚಿಸಿದರು. 

ಕಬ್ಬಿನಾಲೆಯಿಂದ ಮುನಿಯಾಲುಗೆ ಹೋಗುವ ರಸ್ತೆ ಕಿರಿದಾಗಿದ್ದು, ಬಸ್ ಸಂಚರಿಸಲು ಕಷ್ಟವಾಗಿದೆ ರಸ್ತೆ ಅಗಲೀಕರಣ ಮಾಡಲು, ಈ ಭಾಗದಲ್ಲಿ ಮೊಬೈಲ್ ನೆಟ್‌ವರ್ಕ್ ಸಮಸ್ಯೆ ಅಧಿಕವಾಗಿದ್ದು, ಜಿಯೋ ಸಂಸ್ಥೆಯವರು ಕೇಬಲ್ ಅಳವಡಿಸಲು, ವಿದ್ಯುತ್ ಕಂಬಗಳನ್ನು ಅಳವಡಿಸಲು ಅರಣ್ಯ ಇಲಾಖೆಯ ಆಕ್ಷೇಪಗಳಿದ್ದು, ಇದನ್ನು ಬಗೆಹರಿಸುವಂತೆ ಸಾರ್ವಜನಿಕರು ಕೋರಿದರು. ಈ ಕುರಿತು ಉತ್ತರಿಸಿದ ಅರಣ್ಯ ಇಲಾಖೆ ಅಧಿಕಾರಿ ಈ ಎಲ್ಲಾ ಕಾಮಗಾರಿಗಳಿಗೆ ಇಲಾಖೆಯಿಂದ ಅಡ್ಡಿಪಡಿಸುತ್ತಿಲ್ಲ, ಆದರೆ ಕಾಮಗಾರಿ  ಮಾಡುತ್ತಿರುವ  ಬಗ್ಗೆ ಇಲಾಖೆಗೆ ಮಾಹಿತಿ ನೀಡಿ, ಅನುಮತಿ ಪತ್ರ ಪಡೆಯುವಂತೆ ತಿಳಿಸಿದರು.

ಈ ಭಾಗದ ನೆಟ್‌ವರ್ಕ್ ಸಮಸ್ಯೆ ಕುರಿತಂತೆ ಬಿ.ಎಸ್.ಎನ್.ಎಲ್ ಹಾಗೂ ಖಾಸಗಿ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವುದಾಗಿ ಜಿಲ್ಲಾಧಿಕಾರಿ ಹೇಳಿದರು.

ಪಡಿತರ ಅಂಗಡಿಯಲ್ಲಿ ಸ್ಥಳೀಯ ಕುಚ್ಚಿಗೆ ಅಕ್ಕಿ ನೀಡುವ ಕುರಿತಂತೆ ಸಾರ್ವಜನಿಕ ಮನವಿಗೆ ಉತ್ತರಿಸಿದ ಜಿಲ್ಲಾಧಿಕಾರಿ, ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ತರೆಯಲಾಗುವ ಖರೀದಿ ಕೇಂದ್ರಗಳಿಗೆ  ಜಿಲ್ಲೆಯ ರೈತರು ಭತ್ತವನ್ನು ನೀಡಿದರೆ ಸ್ಥಳೀಯ ಕುಚ್ಚಿಗೆ ಅಕ್ಕಿ ನೀಡಲು ಸಾಧ್ಯವಾಗಲಿದೆ. ಆದರೆ ಜಿಲ್ಲೆಯ ರೈತರು ಇದುವರೆಗೆ 1 ಕ್ವಿಂಟಾಲ್ ಸಹ ಭತ್ತವನ್ನು ಖರೀದಿ ಕೇಂದ್ರಗಳಿಗೆ ನೀಡಿಲ್ಲ. ಇದರಿಂದ ಸ್ಥಳೀಯ ಕುಚ್ಚಿಗೆ ನೀಡಲು ಸಾಧ್ಯವಾಗುತ್ತಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಪಂಚಾಯತ್ ರಾಜ್ ಇಲಾಖೆಗೆ ಸಂಬಂಧಿಸಿದ 29, ಕಂದಾಯ ಇಲಾಖೆಯ 27, ಮೆಸ್ಕಾಂನ 18, ಬಿ.ಎಸ್.ಎನ್.ಎಲ್‌ನ 4 ಸೇರಿದಂತೆ ಒಟ್ಟು 119 ಅರ್ಜಿಗಳನ್ನು ಪರಿಶೀಲಿಸಿ ನಂತರ ಸಭೆಯಲ್ಲಿ ಸಾರ್ವಜನಿಕರು ಅಹವಾಲುಗಳನ್ನು ಜಿಲ್ಲಾಧಿಕಾರಿಗೆ ಸಲ್ಲಿಸಿದರು. ಇದೇ ಸಂದರ್ಭದಲ್ಲಿ ವಿವಿಧ ಫಲಾನುಭವಿಗಳಿಗೆ ಜಿಲ್ಲಾಧಿಕಾರಿ ಸವಲತ್ತುಗಳನ್ನು ವಿತರಿಸಿದರು.

 ಕಾರ್ಯಕ್ರಮದಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಕುಂದಾಪುರ ಉಪ ವಿಭಾಗಾಧಿಕಾರಿ ರಾಜು, ಡಿವೈಎಸ್ಪಿ ಜೈ ಶಂಕರ್, ಜಿಲ್ಲಾ ಪಂಚಾಯತ್ ಸದಸ್ಯೆ ಜ್ಯೋತಿ ಹರೀಶ್, ತಾ.ಪಂಚಾಯತ್ ಅಧ್ಯಕ್ಷ ರಮೇಶ್, ಮುದ್ರಾಡಿ ಗ್ರಾ.ಪಂ. ಅಧ್ಯಕ್ಷ ಮಂಜುನಾಥ್ ಮತ್ತಿತರರು ಉಪಸ್ಥಿತರಿದ್ದರು. ಹೆಬ್ರಿ ತಹಸೀಲ್ದಾರ್ ಪುರಂದರ ಸ್ವಾಗತಿಸಿ ವಂದಿಸಿದರು.

ಮಧ್ಯಾಹ್ನ ಭೋಜನದ ನಂತರ  ಕೊಂಕಣಾರಬೆಟ್ಟು ಶಾಲೆಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ನಂತರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸೋಮೇಶ್ವರ ಪೇಟೆ ನಾಡ್ಪಾಲುವಿನಲ್ಲಿ ಸಾರ್ವಜನಿಕರ ಅಹವಾಲುಗಳನ್ನು ಸ್ವೀಕರಿಸಿದ ಜಿಲ್ಲಾಧಿಕಾರಿ ಜಿ.ಜಗದೀಶ್, ರಾತ್ರಿ ಸ್ಥಳೀಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿ, ಶಾಲೆಯಲ್ಲಿಯೇ ವಾಸ್ತವ್ಯ ಮಾಡಿದರು.

Subscribe to our newsletter!

Other related posts

error: Content is protected !!