ಸಕಾಲ ಅರ್ಜಿ ನಿಗಧಿತ ಕಾಲಾವಧಿಯೊಳಗೆ ವಿಲೇವಾರಿ: ಎಂ.ಜೆ ರೂಪಾ

 ಸಕಾಲ ಅರ್ಜಿ ನಿಗಧಿತ ಕಾಲಾವಧಿಯೊಳಗೆ ವಿಲೇವಾರಿ: ಎಂ.ಜೆ ರೂಪಾ
Share this post

ಮಂಗಳೂರು, ಮಾರ್ಚ್ 01, 2021: ಸಾರ್ವಜನಿಕರಿಂದ ವಿವಿಧ ಇಲಾಖೆಗಳಲ್ಲಿ ಸಕಾಲದ ಯೋಜನೆಯಡಿ ಸ್ವೀಕೃತವಾದ ಅರ್ಜಿಗಳನ್ನು ನಿಗಧಿತ ಕಾಲಾವಧಿಯ ಒಳಗೆ ನಿಯಮಾನುಸಾರ ವಿಲೇವಾರಿ ಮಾಡಬೇಕು ಎಂದು ಅಪರ ಜಿಲ್ಲಾಧಿಕಾರಿ ಎಂ.ಜೆ ರೂಪಾ ಹೇಳಿದರು.

ಅವರು ಇಂದು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತ ವತಿಯಿಂದ ಆಯೋಜಿಸಲಾಗಿದ್ದ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಕಾಲ ಯೋಜನೆಯಡಿಯಲ್ಲಿ 98 ಇಲಾಖೆಗಳಲ್ಲಿ 1025ಕ್ಕೂ ಹೆಚ್ಚು ಸೇವೆಗಳನ್ನು ಒದಗಿಸಲಾಗುತ್ತಿದೆ. ಸಕಾಲದ ವ್ಯಾಪ್ತಿಯಲ್ಲಿ ಬರುವ ಸೇವೆಗಳನ್ನು ಸಕಾಲದ ಅಡಿಯಲ್ಲಿ ಅರ್ಜಿಗಳನ್ನು ಸ್ವೀಕರಿಸಿ ವಿಳಂಬವಿಲ್ಲದೆ ನಿಗಧಿತ ಕಾಲಾವಧಿಯ ಒಳಗೆ ವಿಲೇವಾರಿ ಮಾಡಬೇಕು ಎಂದರು.

ರಾಜ್ಯದಲ್ಲಿ ದ.ಕ. ಜಿಲ್ಲೆಯು ಸಕಾಲ ಅರ್ಜಿಗಳ ವಿಲೇವಾರಿಯಲ್ಲಿ 6 ನೇ ಸ್ಥಾನದಲ್ಲಿದೆ ಎಂದ ಅವರು, ಜಿಲ್ಲೆಯಲ್ಲಿ ಜನವರಿ ತಿಂಗಳಲ್ಲಿ 93.477 ಅರ್ಜಿಗಳು ಬಂದಿದ್ದು, 80,661 ಅರ್ಜಿಗಳು ವಿಲೇವಾರಿಯಾಗಿದ್ದರೆ,  4,483 ಅರ್ಜಿಗಳು ತಿರಸ್ಕ್ರತವಾಗಿವೆ. ಮಂಗಳೂರು ತಾಲೂಕಿನಲ್ಲಿ 36,085 ಅರ್ಜಿ ಸ್ವೀಕೃತಿಯಾಗಿ 34,389 ವಿಲೇವಾರಿಯಾಗಿವೆ ಎಂದು ಹೇಳಿದರು.

ಸಕಾಲ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಬೇಕು. ಪ್ರತಿ ಜಿಲ್ಲೆಯಲ್ಲಿ ಸಕಾಲ ಅನುಷ್ಠಾನದ ಪರಿಶೀಲನೆಗಾಗಿ ಸಮನ್ವಯ ಸಮಿತಿ ಹಾಗೂ ಪರಿಶೀಲನಾ ಸಮಿತಿ ಎಂಬ ಎರಡು ಸಮಿತಿಗಳನ್ನು ರಚಿಸಲಾಗಿದೆ.

ಸಮನ್ವಯ ಸಮಿತಿಯ ತಂಡವು ಇಲಾಖೆಗಳ ನಡುವೆ ಸಮನ್ವಯ ಕುರಿತಾದ ವಿಷಯಗಳ ಬಗ್ಗೆ ಪ್ರತಿ ಸೋಮವಾರದಂದು ಸಭೆ ಕರೆದು ಸಕಾಲ ಯೋಜನೆಯ ಪರಿಶೀಲನೆ ನಡೆಸಲಾಗುತ್ತದೆ ಹಾಗೂ ಪರಿಶೀಲನಾ ಸಮಿತಿಯ ತಂಡವು ಪ್ರತಿ ಶನಿವಾರ ಅವರ ವ್ಯಾಪ್ತಿಯ ವಿವಿಧ ಸರ್ಕಾರಿ ಕಚೇರಿಗಳಿಗೆ ಭೇಟಿ ನೀಡಿ ತಪಾಸಣೆ ನಡೆಸುವ ಕಾರ್ಯವನ್ನು ಮಾಡಬೇಕು ಎಂದರು.

ಪರಿಶೀಲನೆ ನಡೆಸುವ ಸಂದರ್ಭದಲ್ಲಿ ಅತಿ ಹೆಚ್ಚು ತಿರಸ್ಕ್ರತ, ಹೆಚ್ಚು ವಿಳಂಬ ವಿಲೇವಾರಿ ಹಾಗೂ ಹೆಚ್ಚಿನ ಪ್ರಮಾಣದ ಶೂನ್ಯ ಸ್ವೀಕೃತಿಗಳಾಗಿವೆ ಎಂಬ ಬಗ್ಗೆ ಗಮನಹರಿಸಬೇಕು. .

ಜಿಲ್ಲಾ ಮಟ್ಟದ ಅಧಿಕಾರಿಗಳು ಸಕಾಲ ಯೋಜನೆಯ ಬಗ್ಗೆ ಪ್ರಕಟಣೆ ನೀಡಬೇಕು ಎಂದ ಅವರು, ಕಚೇರಿಯ ಆವರಣದಲ್ಲಿ ಸಕಾಲದ ಬಗ್ಗೆ ಮಾಹಿತಿ ಫಲಕಗಳನ್ನು ಅಳವಡಿಸುವುದರ ಜೊತೆಗೆ ಕರಪತ್ರಗಳನ್ನು ಹಂಚುವ ಮೂಲಕ ಜನರಲ್ಲಿ ಸಕಾಲದ ಬಗ್ಗೆ ಅರಿವು ಮೂಡಿಸಬೇಕು ಎಂದರು.

ಸಭೆಯಲ್ಲಿ ನಗರಾಭಿವೃದ್ಧಿ ಕೋಶ ಯೋಜನಾ ನಿರ್ದೇಶಕಿ ಗಾಯತ್ರಿ ನಾಯಕ್, ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.

Subscribe to our newsletter!

Other related posts

error: Content is protected !!