ಗ್ರಾಮೀಣ ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹ: ಡಾ. ಕೆ ಸಿ ನಾರಾಯಣಗೌಡ
ಉಡುಪಿ ಫೆಬ್ರವರಿ 26, 2021: ಗ್ರಾಮೀಣ ಪ್ರದೇಶಗಳಲ್ಲಿನ ಯುವಪ್ರತಿಭೆಗಳ ಕಲೆಯನ್ನು ಗುರುತಿಸಿ , ಅವರ ಪ್ರತಿಭೆಯನ್ನು ದೇಶ-ವಿದೇಶಗಳಲ್ಲಿಯೂ ಮೆರಗು ಮೂಡಿಸುವಂತೆ ಮಾಡುವ ನಿಟ್ಟಿನಲ್ಲಿ , ರಾಜ್ಯದಲ್ಲಿ ಯುವಕರನ್ನು ಪ್ರೋತ್ಸಾಹಿಸುವಂತಹ ಯೋಜನೆಗಳನ್ನು ತರಲಾಗುವುದು ಎಂದು ಯುವ ಸಬಲೀಕರಣ ಮತ್ತು ಕ್ರೀಡೆ ಹಾಗೂ ಯೋಜನೆ ಕಾರ್ಯಕ್ರಮ ಸಂಯೋಜನೆ ಮತ್ತು ಸಾಂಖ್ಯಿಕ ಸಚಿವ ಡಾ. ನಾರಾಯಣ ಗೌಡ ಹೇಳಿದರು.
ಅವರು ಶುಕ್ರವಾರ ಮಟ್ಟಾರುವಿನಲ್ಲಿ , ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ನಡೆದ 3.29 ಕೋಟಿ ವೆಚ್ಚದ ವಿವಿಧ ಕಾಮಗಾರಿಗಳ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು.
ಕ್ರೀಡಾ ಕ್ಷೇತ್ರದಲ್ಲಿ ಗಣನೀಯ ಸಾದನೆ ತೋರುವ ಯುವಕರಿಗೆ ಅಗತ್ಯ ತರಬೇತಿ, ಉದ್ಯೋಗ ನೀಡಲು ಕ್ರಮ ಕೈಗೊಳ್ಳಲಾಗುವುದು. ಯುವಕರ ಹೊಸ ಪ್ರತಿಭೆಯನ್ನು ಅನಾವರಣಗೋಳಿಸಲು ಸುಸಜ್ಜಿತ ವೇದಿಕೆ ಕಲ್ಪಿಸಲಾಗುವುದು. ಕರಾವಳಿ ಭಾಗದ ಜನತೆಯು ಕಲೆ, ಶಿಕ್ಷಣ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿಯೂ ಮುಂದಿದ್ದಾರೆ ಎಂದು ಸಚಿವರು ಹೇಳಿದರು.
ಕೋವಿಡ್ ಎರಡನೇ ಅಲೆ ಕೇರಳ ಮತ್ತು ಮಹಾರಾಷ್ಟçದಲ್ಲಿ ಕಾಣಿಸಿಕೊಳ್ಳುತ್ತಿದ್ದು ಅದರ ಬಗ್ಗೆ ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕು.ಸಭೆ, ಸಮಾರಂಭಗಳಲ್ಲಿ ಕೋವಿಡ್ ಸುರಕ್ಷತಾ ಕ್ರಮಗಳನ್ನು ತಪ್ಪದೇ ಪಾಲಿಸಬೇಕು ಎಂದು ಸಚಿವ ಡಾ.ಕೆ.ಸಿ. ನಾರಾಯಣಗೌಡ ಹೇಳಿದರು.
ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಕೈಗೊಳ್ಳಲಾಗುವ ಕಾಮಗಾರಿಗಳಿಗೆ ಅಗತ್ಯವಿರುವ ಅನುದಾನವನ್ನು ಆದಷ್ಟು ಶೀಘ್ರದಲ್ಲಿ ಬಿಡುಗಡೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಆ ಮೂಲಕ ಕರಾವಳಿ ಜಿಲ್ಲೆಗಳ ಜನಸಾಮಾನ್ಯರಿಗೆ ಅಗತ್ಯ ಮೂಲಭೂತ ಸೌಲಭ್ಯಗಳ ಪ್ರಯೋಜನ ಒದಗಿಸಲಾಗುವುದು ಹಾಗೂ ಸ್ಥಳೀಯ ಜನರ ಸಮಸ್ಯೆಗಳಿಗೆ ಅನುಗುಣವಾಗಿ
ಯೋಜನೆಗಳನ್ನು ಗುರುತಿಸಿ , ಪ್ರಾಥಮಿಕ ಸರ್ವೇ, ವರದಿ ಮತ್ತು ಸಮಗ್ರ ಯೋಜನಾ ವರದಿಗಳನ್ನು ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದು ಸಚಿವರು ಹೇಳಿದರು.
ಕಾರ್ಯಕ್ರಮದ ಮುಖ್ಯಅಥಿತಿಯಾಗಿ ಮಾತನಾಡಿದ ಕರಾವಳಿ ಪ್ರಾಧಿಕಾರದಅಧ್ಯಕ್ಷ ಮಟ್ಟಾರು ರತ್ನಾಕರ್ ಹೆಗ್ಡೆ , ಪ್ರಾಧಿಕಾರದ ವತಿಯಿಂದ ಕರಾವಳಿ ಜಿಲ್ಲೆಗಳಲ್ಲಿ ಇದುವರೆಎ 4 ತೂಗು ಸೇತುವೆ, 117 ಕಾಲುಸಂಕ/ಕಿರು ಸೇತುವೆ, 35 ಸುಸಜ್ಜಿತ ಮೀನು ಮಾರುಕಟ್ಟೆ , 8 ಉದ್ಯಾನವನ, 90 ರಸ್ತೆ ಸೇರಿದಂತೆ ಹಲವು ಕಾಮಗಾರಿಗಳನ್ನು ಮುಕ್ತಾಯಗೊಳಿಸಿದ್ದು, ಪ್ರಸಕ್ತ ಬಜೆಟ್ ನಲ್ಲಿ ಪ್ರಾಧಿಕಾರಕ್ಕೆ 100 ಕೋಟಿ ರೂ ಗಳ ಅನುದಾನವನ್ನು ಕೋರಲಾಗಿದೆ ಎಂದರು.
ಜಿಲ್ಲಾ ಪಂಚಾಯತ್ ಅಧ್ಯಕ್ಷ ದಿನಕರ ಬಾಬು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಕಾಪು ತಾಲೂಕು ಪಂಚಾಯತ್ ಅಧ್ಯಕ್ಷೆ ಶಶಿಪ್ರಭಾ ಶೆಟ್ಟಿ, ತಾ.ಪಂ ಸದಸ್ಯೆ ಗೀತಾ ವಾಗ್ಲೆ, ಶಿರ್ವ ಗ್ರಾಂ.ಪಂಚಾಯತ್ ಅಧ್ಯಕ್ಷೆ ಗ್ರೆಗೋರಿ ಕೊನ್ರಾಡ್ ಕಸ್ತಲಿನೋ, ಜಿ.ಪಂ ಸದಸ್ಯರಾದ ಗೀತಾಂಜಲಿ ಸುವರ್ಣ, ಶಿಲ್ಪಾ ಸುವರ್ಣ, ಯೋಜನಾ ಇಲಾಖೆ ನಿರ್ದೇಶಕ ಚಂದ್ರಶೇಖರ್, ಜಿ.ಪಂ. ಮುಖ್ಯ ಯೋಜನಾಧಿಕಾರಿ ಶ್ರೀನಿವಾಸ ರಾವ್ ಹಾಗೂ ಸ್ಥಳೀಯ ವಿವಿಧ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.ಕರಾವಳಿ ಪ್ರಾಧಿಕಾರ ಕಾರ್ಯದರ್ಶಿ ಪ್ರದೀಪ್ ಡಿಸೋಜ ಸ್ವಾಗತಿಸಿದರು.