ಬಿಸಿಲಿನ ಬೇಗೆಯಿಂದ ತೋಟಗಾರಿಕೆ ಬೆಳೆ ರಕ್ಷಣೆ ಕುರಿತು ಮಾಹಿತಿ
ಉಡುಪಿ, ಫೆಬ್ರವರಿ 20, 2021: ತೋಟಗಾರಿಕೆ ಬೆಳೆಯನ್ನು ಬಿಸಿಲಿನ ಬೇಗೆಯಿಂದ ರಕ್ಷಿಸಲು ಮಣ್ಣಿನಲ್ಲಿ ತೇವಾಂಶವನ್ನು ಹಿಡಿದಿಟ್ಟುಕೊಂಡು ಉತ್ತಮ ಫಸಲನ್ನು ಪಡೆಯಲು ಈ ಕೆಳಕಂಡ ಕ್ರಮಗಳನ್ನು ಅನುಸರಿಸುವುದು ಅವಶ್ಯಕವಾಗಿದೆ ಎಂದು ಜಿಲ್ಲಾ ತೋಟಗಾರಿಕೆ ಇಲಾಖೆ ಮಾಹಿತಿ ನೀಡಿದೆ.
ಹನಿ ನೀರಾವರಿ ಅಳವಡಿಕೆ: ಹನಿ ನೀರಾವರಿಯಿಂದ ಗಿಡಗಳಿಗೆ ಅವಶ್ಯವಿರುವಷ್ಟು ಪ್ರಮಾಣದಲ್ಲಿ ನೀರನ್ನು ಒದಗಿಸಬಹುದು. ಬೇರಿಗೆ ನೇರವಾಗಿ ನೀರನ್ನು ಒದಗಿಸುವುದರಿಂದ ನೀರು ಪೋಲಾಗುವುದನ್ನು ತಡೆಗಟ್ಟಬಹುದು ಹಾಗೂ ಮಿತಬಳಕೆಯಿಂದ ಅಧಿಕ ಇಳುವರಿಯನ್ನು ಪಡೆಯಬಹುದಾಗಿದೆ.
ತೋಟಗಳಲ್ಲಿ ಸಮಗ್ರ ತೇವಾಂಶ ಸಂರಕ್ಷಣಾ ಕ್ರಮಗಳನ್ನು ಅಳವಡಿಸುವುದು: ಇಳಿಜಾರಿಗೆ ಅಡ್ಡವಾಗಿ ಉಳುಮೆ, ಬಹುಬೆಳೆ ಪದ್ಧತಿ, ನೆಲಹೊದಿಕೆ, ಕಾಂಟೂರ್ ಬಂಡಿಂಗ್ ಇತ್ಯಾದಿ ಅಳವಡಿಸಬೇಕು.
ಹೊದಿಕೆ ಹಾಕುವುದು (ಮಲ್ಚಿಂಗ್): ತೆಂಗು ಅಥವಾ ಅಡಿಕೆ ತೋಟಗಳಲ್ಲಿ ಸಾಮಾನ್ಯವಾಗಿ ದೊರೆಯುವಂತಹ ತೆಂಗು ಅಥವಾ ಅಡಿಕೆ ಗರಿಗಳನ್ನು ಕತ್ತರಿಸಿ ಬುಡದ ಸುತ್ತಲೂ ಹಾಕುಬೇಕು. ಇತರ ಬೆಳೆಗಳಿಗೆ ಒಣಹುಲ್ಲು ಇತ್ಯಾದಿಗಳನ್ನು ಹೊದಿಸಿ ತೇವಾಂಶವನ್ನು ಸಂರಕ್ಷಿಸಬೇಕು. ಇದರಿಂದ ಸೂರ್ಯನ ಕಿರಣಗಳಿಂದ ನೀರಿನ ಆವಿಯಾಗುವಿಕೆ ಕಡಿಮೆಯಾಗಿ, ಮಣ್ಣಿನಲ್ಲಿ ತೇವಾಂಶ ಹಿಡಿದಿಟ್ಟುಕೊಳ್ಳಲು ಅನುಕೂಲವಾಗುತ್ತದೆ.
ಬೆಳೆ ಆಯ್ಕೆ: ಕಡಿಮೆ ನೀರನ್ನು ಬಯಸುವಂತಹ ಬೆಳೆಗಳನ್ನು ಹಾಗೂ ಅಲ್ಫಾವಧಿ ಬೆಳೆಗಳಾದ ತರಕಾರಿ ಬೆಳೆಗಳನ್ನು ಬೆಳೆಯುವುದು.
ಸಾವಯವ ಗೊಬ್ಬರಗಳ ಬಳಕೆ: ಸಾವಯವ ಗೊಬ್ಬರಗಳಲ್ಲಿ ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಅಧಿಕವಾಗಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಕೊಟ್ಟಿಗೆ ಗೊಬ್ಬರ, ಹಸಿರೆಲೆ ಗೊಬ್ಬರ ಹಾಗೂ ಜೈವಿಕ ಗೊಬ್ಬರಗಳನ್ನು ತೋಟಗಾರಿಕೆಯಲ್ಲಿ ಬಳಕೆ ಮಾಡಬೇಕು.
ಮಳೆ ನೀರು ಕೊಯ್ಲು: ಮಳೆ ನೀರು ಶೇಖರಣೆಗಾಗಿ ಕೃಷಿಹೊಂಡ ನಿರ್ಮಿಸಿಕೊಂಡು ಅದರಲ್ಲಿ ಮಳೆನೀರನ್ನು ಸಂಗ್ರಹಿಸಿ ಮಣ್ಣಿನ ತೇವಾಂಶ ಕಡಿಮೆಯಾದಾಗ ತೋಟದ ಬೆಳೆಗಳಿಗೆ ಈ ನೀರನ್ನು ಉಪಯೋಗಿಸಬಹುದಾಗಿದೆ.
ಸಂರಕ್ಷಿತ ಬೇಸಾಯ: ತರಕಾರಿ ಬೆಳೆಗಳನ್ನು ಹಸಿರುಮನೆ ಅಥವಾ ನೆರಳು ಪರದೆಯಲ್ಲಿ ಬೆಳೆಯುವುದರಿಂದ ಕಡಿಮೆ ನೀರಿನಲ್ಲಿ ಹೆಚ್ಚಿನ ಇಳುವರಿಯನ್ನು ಪಡೆಯಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರ ಮೊ.ನಂ: 8971037181 ಅನ್ನು ಸಂಪರ್ಕಿಸುವAತೆ ಜಿಲ್ಲಾ ಪಂಚಾಯತ್ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.