9 ರಿಂದ 12 ತರಗತಿಗೆ ಪೂರ್ಣಾವಧಿ ಬೋಧನೆ: ಸುರೇಶ್ ಕುಮಾರ್

 9 ರಿಂದ 12 ತರಗತಿಗೆ ಪೂರ್ಣಾವಧಿ ಬೋಧನೆ: ಸುರೇಶ್ ಕುಮಾರ್
Share this post
Classes to resume in Karnataka

ಬೆಂಗಳೂರು ಜನವರಿ 28, 2021: ಪ್ರಸ್ತುತ ಶೈಕ್ಷಣಿಕ ವರ್ಷದ 9 ಮತ್ತು 11ನೇ ತರಗತಿಗಳನ್ನು ಫೆಬ್ರವರಿ 1ರಿಂದ ಪೂರ್ಣ ಪ್ರಮಾಣದಲ್ಲಿ ಆರಂಭಿಸಲಾಗುವುದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.

ಎಲ್ಲ ತರಗತಿಗಳನ್ನು ಆರಂಭಿಸಬೇಕೆಂಬ ವಿದ್ಯಾರ್ಥಿ ಮತ್ತು ಪೋಷಕ ವಲಯದ ಬೇಡಿಕೆಯ ಹಿನ್ನೆಲೆಯಲ್ಲಿ ಗುರುವಾರ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಮತ್ತು ರಾಜ್ಯ ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಅಧ್ಯಕ್ಷರು ಹಾಗೂ ಸದಸ್ಯರು ಮತ್ತು ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳೊಂದಿಗೆ ನಡೆದ ಸುದೀರ್ಘ ಚರ್ಚೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇದರೊಂದಿಗೆ ಈಗಾಗಲೇ ಆರಂಭವಾಗಿರುವ 10 ಮತ್ತು 12ನೇ ತರಗತಿಗಳೂ ಸಹ ಮೊದಲಿನಂತೆ ಪ್ರತಿದಿನ ಪೂರ್ಣ ಆವಧಿಯಲ್ಲಿ ನಡೆಯಲಿವೆ ಎಂದರು.

ಇದನ್ನೂ ಓದಿ: ಶಾಲಾ ಶುಲ್ಕ ನಿಗದಿಪಡಿಸಿದ ಸರಕಾರ

ಒಂದರಿಂದ ಎಂಟನೇ ತರಗತಿಗಳನ್ನು ಆರಂಭಿಸುವ ಕುರಿತಂತೆ ಫೆಬ್ರವರಿ ಎರಡನೇ ವಾರದಲ್ಲಿ ಆರೋಗ್ಯ ಇಲಾಖೆ ಮತ್ತು ಕೋವಿಡ್ ತಾಂತ್ರಿಕ ಸಲಹಾ ಸಮಿತಿಯೊಂದಿಗೆ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲು ಸಭೆಯಲ್ಲಿ ನಿರ್ಧರಿಸಲಾಗಿದ್ದು, ಪ್ರಸ್ತುತ 9ರಿಂದ 12ವರೆಗಿನ ತರಗತಿಗಳು ಪೂರ್ಣ ಅವಧಿಯಲ್ಲಿ ಸಮಿತಿಯ ಮಾರ್ಗದರ್ಶನದಂತೆ ಕೋವಿಡ್ ನಿಯಮಗಳನ್ನು ಅನುಸರಿಸಿ ನಡೆಯಲಿವೆ. ಹಾಗೆಯೇ 6ರಿಂದ 8ನೇ ತರಗತಿಗಳಿಗೆ ಪರಿಷ್ಕೃತ ವಿದ್ಯಾಗಮ ತರಗತಿಗಳು ಈಗ ನಡೆಯುತ್ತಿರುವಂತೆ ಮುಂದುವರೆಯಲಿವೆ ಎಂದು ಸಚಿವರು ಹೇಳಿದರು.

ಈಗಾಗಲೇ ಆರಂಭವಾಗಿರುವ 12ನೇ ತರಗತಿಯ ಸರಾಸರಿ ಶೇ. 75, 10ನೇ ತರಗತಿಯ ಶೇ.70, 6ರಿಂದ 9ನೇ ತರಗತಿಯ ವಿದ್ಯಾಗಮ ತರಗತಿಯ ಹಾಜರಾತಿ ಶೇ. 45ರಷ್ಟು ಹಾಜರಾತಿ ಇರುವ ಅಂಶವನ್ನು ಅಂಶವನ್ನು ತಾಂತ್ರಿಕ ಸಲಹಾ ಸಮಿತಿ ಅವಲೋಕಿಸಿ 9 ಮತ್ತು 11ನೇ ತರಗತಿಗಳ ಆರಂಭಕ್ಕೆ ಅನುಮತಿ ನೀಡಿದೆ ಎಂದು ಸುರೇಶ್ ಕುಮಾರ್ ತಿಳಿಸಿದರು.

ಇದನ್ನೂ ಓದಿ: ಮುಂದಿನ ಶೈಕ್ಷಣಿಕ ವರ್ಷ ಆರಂಭದ ಬಗ್ಗೆ ಸರಕಾರ ನಿರ್ಧಾರ

ತಾವು ಈ ಅವಧಿಯಲ್ಲಿ ಹತ್ತಕ್ಕೂ ಹೆಚ್ಚು ಜಿಲ್ಲೆಗಳ ಹಲವಾರು ಶಾಲೆಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಪೋಷಕರು ಮತ್ತು ಶಾಲಾಡಳಿತ ಮಂಡಳಿಗಳು ಎಲ್ಲ ತರಗತಿಗಳನ್ನು ಆರಂಭಿಸಬೇಕೆಂದು ಒತ್ತಾಯಿಸುತ್ತಿದ್ದಾರೆ. ನಾವು ಈ ಹಿಂದೆ ತಾಂತ್ರಿಕ ಸಲಹಾ ಸಮಿತಿಯ ನಿರ್ದೇಶನಗಳನ್ನು ಚಾಚೂ ತಪ್ಪದೇ ಪಾಲಿಸಿ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ತೆಗೆದುಕೊಂಡ ಹಿನ್ನೆಲೆಯಲ್ಲಿ ಇಲ್ಲಿಯವರೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಅಧೀನದಲ್ಲಿ ಬರುವ ಯಾವುದೇ ಶಾಲೆಯಿಂದ ಕೋವಿಡ್ ಸೋಂಕು ಹರಡುವಿಕೆ ವರದಿಯಾಗಿಲ್ಲ ಎಂದು ಸಚಿವರು ತಿಳಿಸಿದರು. ಮಕ್ಕಳು ಭೌತಿಕವಾಗಿ ಶಾಲೆಗಳಲ್ಲಿ ಹಾಜರಾಗುತ್ತಿರುವ ಕಾರಣ ಕಲಿಕಾ ಆಸಕ್ತಿ ಹೆಚ್ಚಿದೆ. ಬೋಧನೆ ಪರಿಣಾಮಕಾರಿಯಾಗುತ್ತಿದೆ ಎಂದು ಸಚಿವರು ತಿಳಿಸಿದ ಸಚಿವರು ಶಾಲೆ ಆರಂಭವಾದ ಮೇಲೆ ಮಕ್ಕಳಿಗಾಗಲೀ ಇಲ್ಲವೇ ಶಿಕ್ಷಕರಿಗಾಗಲಿ ಯಾವುದೇ ಸೋಂಕು ಹರಡಿಲ್ಲ ಎಂದು ತಿಳಿಸಿದರು.

ಇತ್ತೀಚಿಗೆ ಶಿಕ್ಷಕ-ಪದವೀಧರ ಕ್ಷೇತ್ರದ ವಿಧಾನಪರಿಷತ್ ಸದಸ್ಯರೊಂದಿಗೆ ನಡೆದ ಸಭೆಯಲ್ಲಿ ಎಲ್ಲ ತರಗತಿಗಳು ನಿರಂತರವಾಗಿ ನಡೆಯಬೇಕೆಂದು ಒತ್ತಾಯಿಸಿದ್ದಾರೆ. ಸರ್ಕಾರಿ ನೌಕರರ ಸಂಘ, ಪ್ರಾಥಮಿಕ ಮತ್ತು ಪ್ರೌಢಶಿಕ್ಷಕರ ಸಂಘಟನೆಗಳು, ಪದವಿ ಪೂರ್ವ ಉಪನ್ಯಾಸಕರು ಮತ್ತು ಪ್ರಾಂಶುಪಾಲರ ಸಂಘಗಳು ಮಕ್ಕಳ ಹಿತದೃಷ್ಟಿಯಿಂದ ಎಲ್ಲ ತರಗತಿಗಳನ್ನೂ ಆರಂಭಿಸಬೇಕೆಂದು ಪದೇ ಪದೇ ಒತ್ತಾಯಿಸಿದ್ದಾರೆ ಎಂದು ಸುರೇಶ್ ಕುಮಾರ್ ತಿಳಿಸಿದರು.

ಬಾಲ ಕಾರ್ಮಿಕ ಪದ್ಧತಿ ಮತ್ತು ಬಾಲ ವಿವಾಹಗಳಂತಹ ಸಾಮಾಜಿಕ ಪಿಡುಗುಗಳ ಕುರಿತೂ ನಾವು ಎಚ್ಚರ ವಹಿಸಬೇಕಿದೆ. ಈ ಹಿನ್ನೆಲೆಯಲ್ಲಿ ಎಲ್ಲ ತರಗತಿಗಳನ್ನು ಆರಂಭಿಸಬೇಕೆಂಬುದು ಸಾರ್ವಜನಿಕ ವಲಯದ ಒತ್ತಾಯವಾಗಿದೆ ಎಂದು ಸಚಿವರು ತಿಳಿಸಿದರು.

Subscribe to our newsletter!

Other related posts

error: Content is protected !!