ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ನೀಡಲು ಸಂಪೂರ್ಣ ಸಿದ್ದತೆ

 ಉಡುಪಿ ಜಿಲ್ಲೆಯಲ್ಲಿ ಕೋವಿಡ್ ಲಸಿಕೆ ನೀಡಲು ಸಂಪೂರ್ಣ ಸಿದ್ದತೆ
Share this post

ಉಡುಪಿ, ಜನವರಿ 8, 2021: ಕೋವಿಡ್-19 ಲಸಿಕೆಯನ್ನು ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ನೀಡಬೇಕಿದ್ದು, ಈ ಕುರಿತಂತೆ ಜಿಲ್ಲೆಯಲ್ಲಿ ಸಂಪೂರ್ಣ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದರು.

ಅವರು ಶುಕ್ರವಾರ ಉಡುಪಿಯ ಸರಕಾರಿ ಕೂಸಮ್ಮ ಶಂಭು ಶೆಟ್ಟಿ ಮೆಮೋರಿಯಲ್ ಹಾಜಿ ಅಬ್ದುಲ್ಲಾ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಡೆದ ಕೋವಿಡ್-19 ಲಸಿಕಾ ಕಾರ್ಯಕ್ರಮದ ಡ್ರೈರನ್ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಕೋವಿಡ್ ಲಸಿಕೆಯನ್ನು ಮೊದಲ ಹಂತದಲ್ಲಿ ಆರೋಗ್ಯ ಕಾರ್ಯಕರ್ತರಿಗೆ ನೀಢಬೇಕಿದ್ದು, ಇದಕ್ಕಾಗಿ ಜಿಲ್ಲೆಯ 105 ಸರಕಾರಿ ಮತ್ತು 762 ಖಾಸಗಿ ಆರೋಗ್ಯ ಸಂಸ್ಥೆಗಳ, 5688 ಸರಕಾರಿ ಮತ್ತು 13874 ಖಾಸಗಿ ಆರೋಗ್ಯ ಸಿಬ್ಬಂದಿ ಸೇರಿದಂತೆ ಒಟ್ಟು 19562 ಫಲಾನುಭವಿಗಳನ್ನು ನೊಂದಣಿ ಮಾಡಿದ್ದು, ಇವರಿಗೆ ಲಸಿಕೆ ನೀಡಲು ಸಂಪೂರ್ಣ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದೆ.

ಲಸಿಕೆ ನೀಡುವ ಸಿಬ್ಬಂದಿಗಳಿಗೆ ತರಬೇತಿ ಹಾಗೂ ಅಗತ್ಯ ಕೊಠಡಿಗಳ ನಿರ್ಮಾಣ
ಮಾಡಿಕೊಂಡಿದ್ದು, ಲಸಿಕೆ ಸಾಗಾಟ, ವಿತರಣೆಗೆ ಅಗತ್ಯ ಯೋಜನೆಗಳನ್ನೂ ಸಹ ರೂಪಿಸಲಾಗಿದೆ ಎಂದು ಜಿ.ಜಗದೀಶ್ ಹೇಳಿದರು.
ಡ್ರೈರನ್ ಕಾರ್ಯಕ್ರಮವು, ಲಸಿಕೆ ವಿತರಣೆ ಸಂದರ್ಭದಲ್ಲಿ ಎದುರಿಸಬಹುದಾದ ಸವಾಲುಗಳನ್ನು ಸರಿಪಡಿಸಿಕೊಳ್ಳಲು ಅನುಕೂಲವಾಗಿದೆ. ಕೋವಿಡ್-19 ಲಸಿಕೆಯ ಕುರಿತಂತೆ ಸೋಷಿಯಲ್ ಮೀಡಿಯಾಗಳಲ್ಲಿ ಬರುವ ಅಪಪ್ರಚಾರಗಳಿಗೆ ಸಾರ್ವಜನಿಕರು ಕಿವಿಗೊಡದೇ, ಮುಕ್ತ ಮನಸ್ಸಿನಿಂದ ಲಸಿಕೆಯನ್ನು ಸ್ವೀಕರಿಸುವಂತೆ ತಿಳಿಸಿದ ಜಿಲ್ಲಾಧಿಕಾರಿ ಜಿ.ಜಗದೀಶ್, ಲಸಿಕೆಯನ್ನು ಎರಡನೇ ಹಂತದಲ್ಲಿ ಮುಂಚೂಣಿ ಆರೋಗ್ಯ ಸಿಬ್ಬಂದಿಗಳು ಹಾಗೂ ಮೂರನೇ ಹಂತದಲ್ಲಿ 50 ವರ್ಷ ಮೇಲ್ಪಟ್ಟವರಿಗೆ ವಿತರಿಸಲು ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ. ಲಸಿಕೆ ಪಡೆಯಲು ಪೂರ್ವ ನೊಂದಣಿ ಅಗತ್ಯವಾಗಿದ್ದು, ನೊಂದಣಿ ಮಾಡಿಕೊಳ್ಳದವರಿಗೆ ಲಸಿಕೆ ನೀಡಲಾಗುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಎರಡನೇ ಹಂತದ ಲಸಿಕೆ ಪಡೆಯುವವರ ನೊಂದಣಿ ಕಾರ್ಯಕ್ರಮವನ್ನು ಜನವರಿ ಅಂತ್ಯದೊಳಗೆ ಮುಗಿಸಲಾಗುವುದು. ಲಸಿಕೆ ವಿತರಣ ಕಾರ್ಯಕ್ರಮವನ್ನು ಚುನಾವಣೆ ರೀತಿಯಲ್ಲಿ ಅತ್ಯಂತ ವ್ಯವಸ್ಥಿತವಾಗಿ ನಡೆಸಲಾಗುತ್ತಿದ್ದು, ಈ ಕಾರ್ಯಕ್ಕೆ ನಿಯೋಜಿಸಿರುವ ಎಲ್ಲಾ ಅಧಿಕಾರಿಗಳು ಸಿಬ್ಬಂದಿಗಳು ಅತ್ಯಂತ ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು ಎಂದು ಹೇಳಿದರು.

ಡಿಹೆಚ್‌ಓ ಡಾ. ಸುಧೀರ್ ಚಂದ್ರ ಸೂಡಾ ಮಾತನಾಡಿ, ಜಿಲ್ಲೆಯಲ್ಲಿ 8 ಕೇಂದ್ರಗಳಲ್ಲಿ ಕೋವಿಡ್ ಲಸಿಕೆಯ ಡ್ರೈರನ್ ನಡೆಯುತ್ತಿದ್ದು, ಅದರಲ್ಲಿ ಆರು ಸರ್ಕಾರಿ ಮತ್ತು ಎರಡು ಖಾಸಗಿ ಆಸ್ಪತ್ರೆಗಳಿದ್ದು, ತಾಯಿ ಮತ್ತು ಮಕ್ಕಳ ಆಸ್ಪತ್ರೆ ಉಡುಪಿ, ಸಮುದಾಯ ಆರೋಗ್ಯ ಕೇಂದ್ರ ಬ್ರಹ್ಮಾವರ, ಸಮುದಾಯ ಆರೋಗ್ಯ ಕೇಂದ್ರ ಹೆಬ್ರಿ, ಸಾರ್ವಜನಿಕ ಆಸ್ಪತ್ರೆ ಕಾರ್ಕಳ, ಪ್ರಾಥಮಿಕ ಆರೋಗ್ಯ ಕೇಂದ್ರ ಕಂಡ್ಲೂರು, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಉಡುಪಿ, ಡಾ.ಟಿ.ಎಮ್.ಎ ಪೈ ಆಸ್ಪತೆ ಉಡುಪಿ, ಆದರ್ಶ ಆಸ್ಪತ್ರೆ ಉಡುಪಿ ಇಲ್ಲಿ ನಡೆಯುತ್ತಿದೆ ಎಂದರು.

ಜಿಲ್ಲೆಯಲ್ಲಿ ಲಸಿಕೆ ಸಂಗ್ರಹಣೆಗೆ ವಾಕ್ ಇನ್ ಕೂಲರ್ ಸಿದ್ಧವಾಗಿದ್ದು, 76,000 ಲೀ. ಲಸಿಕೆ ದಾಸ್ತಾನು ಸಾಮರ್ಥ್ಯ ಹೊಂದಿದೆ. ಪ್ರತಿಯೊಂದು ಡ್ರೈರನ್ ಕೇಂದ್ರದಲ್ಲಿ ನಾಲ್ಕು ಜನರ ಅಧಿಕಾರಿಗಳ ತಂಡ ಹಾಗೂ ಓರ್ವ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಪ್ರತಿಯೊಂದು ಶಿಬಿರದಲ್ಲಿಯೂ ನಿರೀಕ್ಷಣಾ ಕೊಠಡಿ, ಲಸಿಕಾ ಕೊಠಡಿ ಹಾಗೂ ನಿಗಾ ಕೊಠಡಿಗಳಾಗಿ ಮೂರು ಕೊಠಡಿಗಳನ್ನು ಮೀಸಲಿಡಲಾಗಿದೆ. ಡ್ರೈರನ್ ಲಸಿಕೆಗೆ ನೊಂದಣಿ ಮಾಡಿದ 25 ಮಂದಿಯನ್ನು ಗುರುತಿಸಲಾಗಿದ್ದು, ಎಲ್ಲಾ ಆರೋಗ್ಯ ಸಂಸ್ಥೆಗಳಲ್ಲಿ ಆಂಬುಲೆನ್ಸ್ ಹಾಗೂ ರ‍್ಯಾಪಿಡ್ ರೆಸ್‌ಪಾನ್ಸ್ ತಂಡಗಳನ್ನು ರಚಿಸಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಲಸಿಕಾ ಅಧಿಕಾರಿ, ಡಾ. ಎಂ.ಜಿ.ರಾಮ, ಜಿಲ್ಲಾ ಸರ್ಜನ್ ಡಾ. ಮಧುಸೂದನ ನಾಯಕ್, ಕೋವಿಡ್ ನೂಡಲ್ ಅಧಿಕಾರಿ ಡಾ. ಪ್ರಶಾಂತ ಭಟ್, ಹಾಗೂ ಆರೋಗ್ಯ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

Subscribe to our newsletter!

Other related posts

error: Content is protected !!