ಹಿಂಗಾರು ಹಂಗಾಮಿನಲ್ಲಿ ರೈತರಿಂದಲೇ ಬೆಳೆ ಸಮೀಕ್ಷೆ
ಉಡುಪಿ, ಡಿಸೆಂಬರ್ 11, 2020: ರಾಜ್ಯದಲ್ಲಿ ಪ್ರಸ್ತುತ ಸಾಲಿನ ಹಿಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು, ಪ್ರಸಕ್ತ ಸಾಲಿನ ಬೆಳೆ ಸಮೀಕ್ಷೆಯಲ್ಲಿ ಮುಂದಿನ 2 ವಾರಗಳ ಕಾಲಾವಧಿಯಲ್ಲಿ ರೈತರಿಂದಲೇ ಬೆಳೆ ಸಮೀಕ್ಷೆ ಕೈಗೊಳ್ಳಲು ಮೊಬೈಲ್ ಆ್ಯಪ್ನ್ನು ಅಭಿವೃದ್ದಿ ಪಡಿಸಲಾಗಿದೆ.
- ರೈತರು ಗೂಗಲ್ ಪ್ಲೇಸ್ಟೋರ್ನಿಂದ ಅಥವಾ https://play.google.com/store/apps/details? id=com.csk.RabiTPKfarmer.cropsurvey ಲಿಂಕ್ ಬಳಸಿ, ಹಿಂಗಾರು ರೈತರ ಬೆಳೆ ಸಮೀಕ್ಷೆ 2020-21 ಆ್ಯಪ್ನ್ನು ಡೌನ್ಲೋಡ್ ಮಾಡಿ, ಆರ್ಥಿಕ ವರ್ಷ ಹಾಗೂ ಋತುವನ್ನು ದಾಖಲಿಸಬೇಕು.
- ನಂತರ ಆಧಾರ್ ಕ್ಯೂಆರ್ ಕೋಡ್ನ್ನು ಸ್ಕ್ಯಾನ್ ಮಾಡಿ ಮೊಬೈಲ್ ಸಂಖ್ಯೆ ನಮೂದಿಸಿ ಸಕ್ರಿಯಗೊಳಿಸುವುದರಿಂದ ಮೊಬೈಲ್ ಸಂಖ್ಯೆಗೆ ಓ.ಟಿ.ಪಿ ಬರಲಿದ್ದು, ಓ.ಟಿ.ಪಿ ಯನ್ನು ದಾಖಲಿಸಿ ಸಲ್ಲಿಸಬೇಕು.
- ಜಿಲ್ಲೆ, ತಾಲೂಕು, ಹೋಬಳಿ, ಗ್ರಾಮ, ಸರ್ವೆ ನಂಬರ್, ಹಿಸ್ಸಾ, ಮಾಲೀಕನ ಹೆಸರು ಆಯ್ಕೆ ಮಾಡಿ ಕ್ಷೇತ್ರವನ್ನು ನಮೂದಿಸಿ, ಸರ್ವೆ ನಂಬರ್ಗಳಡಿ ರೇಖೆಯೊಳಗೆ ನಿಂತು ವಿವರವನ್ನು ದಾಖಲಿಸಿ ಫೋಟೋ ತೆಗೆದು ಮಾಹಿತಿಯನ್ನು ಅಪ್ಲೋಡ್ ಮಾಡಬೇಕು.
ಬೆಳೆ ಸಮೀಕ್ಷೆ ಮಾಹಿತಿಯನ್ನು ಪೃಕೃತಿ ವಿಕೋಪಗಳ ಪರಿಹಾರ ವಿತರಣೆ, ಬೆಂಬಲ ಬೆಲೆ ಯೋಜನೆಯ ಅರ್ಹ ಫಲಾನುಭವಿಗಳ ಗುರುತಿಸುವಿಕೆ, ಬೆಳೆವಿಮೆ ಯೋಜನೆ ಅನುಷ್ಠಾನ, ಋತುಮಾನವಾರು ವಿವಿಧ ಬೆಳೆಗಳ ವಿಸ್ತೀರ್ಣ ವರದಿ ಕಾರ್ಯ, ಬೆಳೆ ಕಟಾವು ಪ್ರಯೋಗ ಅನುಷ್ಠಾನ, ಕೃಷಿ/ತೋಟಗಾರಿಕೆ/ರೇಷ್ಮೆ ಇಲಾಖೆಗಳ ಫಲಾನುಭವಿ ಆಧಾರಿತ ಯೋಜನೆಗಳ ಅನುಷ್ಠಾನ ಹಾಗೂ ಪಹಣಿಯಲ್ಲಿ ಬೆಳೆ ವಿವರ ದಾಖಲಿಸಲು ಬಳಸಲಾಗುವುದು.
ರೈತರು ತಮ್ಮ ಜಮೀನಿನ ಬೆಳೆ ವಿವರವನ್ನು ಯಾವುದೇ ಲೋಪದೋಷಗಳಿಗೆ ಆಸ್ಪದವಿಲ್ಲದಂತೆ ತಾವೇ ದಾಖಲಿಸಲು ಸರ್ಕಾರದಿಂದ ಸುವರ್ಣಾವಕಾಶವನ್ನು ಕಲ್ಪಿಸಿದ್ದು, ಇದರ ಸಂಪೂರ್ಣ ಪ್ರಯೋಜನವನ್ನು ಪಡೆಯುವಂತೆ ಹಾಗೂ ಜಿಲ್ಲೆಯ ರೈತರು ನಿಗದಿತ ಅವಧಿಯೊಳಗೆ ಮೊಬೈಲ್ ಆ್ಯಪ್ನಲ್ಲಿ ತಮ್ಮ ಜಮೀನಿನ ಸರ್ವೆ ನಂಬರ್ವಾರು ಬೆಳೆ ವಿವರವನ್ನು ನಿಖರವಾಗಿ ದಾಖಲಿಸಿ ಹಿಂಗಾರು -2020ರ ಬೆಳೆ ಸಮೀಕ್ಷೆ ಕಾರ್ಯವನ್ನು ಸಂಪೂರ್ಣವಾಗಿ ಯಶಸ್ವಿಗೊಳಿಸುವಂತೆ ಜಿಲ್ಲಾಧಿಕಾರಿ ಜಿ. ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.