ಗ್ರಾಮ ಪಂಚಾಯತ್ ಆಡಳಿತ ಶಾಸಕರೊಂದಿಗೆ ಪೂರಕವಾಗಿ ಸ್ಪಂದಿಸಿದಾಗ ಹೆಚ್ಚಿನ ಅಭಿವೃದ್ಧಿ ಸಾಧ್ಯ – ಶಾಸಕ ರಘುಪತಿ ಭಟ್
ಉಡುಪಿ, ನ 29, 2020: ಗ್ರಾಮ ಪಂಚಾಯತ್ ಆಡಳಿತವು ಶಾಸಕರೊಂದಿಗೆ ಪೂರಕವಾಗಿ ಸ್ಪಂದಿಸಿದಾಗ ಹೆಚ್ಚು ಹೆಚ್ಚು ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲು ಅನುಕೂಲವಾಗುತ್ತದೆ. ಎಲ್ಲಾ ಪಂಚಾಯತ್ ಗಳಲ್ಲೂ ಭಾರತೀಯ ಜನತಾ ಪಾರ್ಟಿಯ ಬೆಂಬಲಿತ ಅಭ್ಯರ್ಥಿಗಳು ಗೆದ್ದು ಆಡಳಿತದ ಚುಕ್ಕಾಣಿ ಹಿಡಿದರೆ ಒಂದು ತಂಡವಾಗಿ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಬಹುದು ಎಂದು ಶಾಸಕ ಕೆ. ರಘುಪತಿ ಭಟ್ ಹೇಳಿದರು.
ಕೆಮ್ಮಣ್ಣು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಇಂದು ನಡೆದ ಕುಟುಂಬ ಮಿಲನ ಕಾರ್ಯಕ್ರಮದಲ್ಲಿ ಶಾಸಕರಾದ ಶ್ರೀ ಕೆ. ರಘುಪತಿ ಭಟ್ ರವರು ಭಾಗವಹಿಸಿ ಮಾತನಾಡಿದರು.
ಸರ್ಕಾರ ಹಾಕಿಕೊಳ್ಳುವ ಜನಕಲ್ಯಾಣ ಕಾರ್ಯಕ್ರಮಗಳು ಕಟ್ಟಕಡೆಯ ನಾಗರಿಕನಿಗೆ ಮುಟ್ಟುವಲ್ಲಿ ಗ್ರಾಮ ಪಂಚಾಯತ್ ಗಳ ಕಾರ್ಯ ಮಹತ್ವದ್ದಾಗಿದೆ. ಸಮಗ್ರ ಉಡುಪಿಯ ಅಭಿವೃದ್ಧಿಯ ದೃಷ್ಟಿಯಿಂದ ಎಲ್ಲಾ ಗ್ರಾಮ ಪಂಚಾಯತ್ ಗಳಲ್ಲಿ ಬಿಜೆಪಿ ಬೆಂಬಲಿತರು ಗೆದ್ದು ಆಡಳಿತಕ್ಕೆ ಬರಬೇಕು. ಈ ನಿಟ್ಟಿನಲ್ಲಿ ನಾವೆಲ್ಲ ಸೇರಿ ಒಂದು ತಂಡವಾಗಿ ಕೆಲಸ ಮಾಡಿ ಬಿಜೆಪಿ ಯನ್ನು ಗೆಲ್ಲಿಸೋಣ ಎಂದರು.
ಈ ಸಂದರ್ಭದಲ್ಲಿ ಗ್ರಾಮಾಂತರ ಬಿಜೆಪಿ ಅಧ್ಯಕ್ಷರಾದ ವೀಣಾ ನಾಯ್ಕ್, ಪ್ರಧಾನ ಕಾರ್ಯದರ್ಶಿಗಳಾದ ವಿಶು ಕುಮಾರ್ ಕಲ್ಯಾಣಪುರ, ಕಲ್ಯಾಣಪುರ ಮಹಾಶಕ್ತಿ ಕೇಂದ್ರದ ಅಧ್ಯಕ್ಷರಾದ ಪ್ರದೀಪ್ ಮಧ್ಯಸ್ಥ, ಪ್ರಧಾನ ಕಾರ್ಯದರ್ಶಿಗಳಾದ ಸತೀಶ್ ಶೆಟ್ಟಿ, ಕೆಮ್ಮಣ್ಣು ಗ್ರಾಮ ಪಂಚಾಯತ್ ಚುನಾವಣಾ ಉಸ್ತುವಾರಿಗಳಾದ ಬಾಲಕೃಷ್ಣ ಶೆಟ್ಟಿ, ಶಕ್ತಿಕೇಂದ್ರದ ಸಂಚಾಲಕರಾದ ರವಿಚಂದ್ರ ಸನಿಲ್, ಉದಯ್ ಕುಮಾರ್, ಸಹ ಸಂಚಾಲಕರಾದ ಗಂಗಾಧರ್, ಮೋಹನ್, ಬೆಂಗ್ರೆ ವಾರ್ಡ್ ಅಧ್ಯಕ್ಷರಾದ ರೋಷನ್ ಶೆಟ್ಟಿ ಮತ್ತು ಕೆಮ್ಮಣ್ಣು ಗ್ರಾಮ ಪಂಚಾಯತ್ ಮಾಜಿ ಸದಸ್ಯರು, ಪಕ್ಷದ ಹಿರಿಯರು, ಪ್ರಮುಖರು, ಕಾರ್ಯಕರ್ತರು ಮತ್ತು ಸ್ಥಳೀಯರು ಉಪಸ್ಥಿತರಿದ್ದರು.