ಉಡುಪಿ ರೇಡಿಯೋ ಟವರ್ ಗೆ ಚಾಲನೆ, ಮತ್ತೆ ಮೊಳಗಲಿದೆ ‘ಬಿಗಿಲ್’
ಉಡುಪಿ , ಅ 02: ಅಜ್ಜರಕಾಡು ಭುಜಂಗ ಪಾರ್ಕ್ ನಲ್ಲಿದ ಸ್ವಾತಂತ್ರ್ಯ ಪೂರ್ವದ ರೇಡಿಯೋ ಟವರ್ ಗೆ ಮರುಜೀವ ಬಂದಿದೆ.
1938 ರಲ್ಲಿ ನಿರ್ಮಾಣಗೊಂಡಿರುವ ಈ ಟವರ್ ಕೆಲವು ವರ್ಷಗಳಿಂದ ಕಾರ್ಯನಿರ್ವಹಣೆ ಸ್ಥಗಿತಗೊಳಿಸಿದ್ದು, ಕಳೆದ ಬಾರಿಯ ಗಾಂಧೀ ಜಯಂತಿ ಕಾರ್ಯಕ್ರಮದಂದು ಇದನ್ನು ಗಮನಿಸಿದ ಜಿಲ್ಲಾಧಿಕಾರಿ ಜಿ.ಜಗದೀಶ್ ಇದನ್ನು ದುರಸ್ತಿಗೊಳಿಸಿ, ಸಾರ್ವಜನಿಕ ಬಳಕೆಗೆ ಅನುವು ಮಾಡಲು ಸೂಚಿಸಿದ್ದರು.
ಇಂದು ಗಾಂಧೀ ಜಯಂತಿಯಂದು ಇದರ ಪ್ರಸಾರ ಕಾರ್ಯಕ್ಕೆ ಶಾಸಕ ರಘುಪತಿಭಟ್ ಚಾಲನೆ ನೀಡಿದರು.
ಪ್ರಸ್ತುತ ದುರಸ್ತಿಗೊಂಡಿರುವ ಈ ಟವರ್ ಮೂಲಕ , ಪಾರ್ಕ್ ಗೆ ಆಗಮಿಸುವ ಸಾರ್ವಜನಿಕರು, ಟವರ್ ನ ಕೆಳಗಡೆ ಇರುವ ಕಲ್ಲುಬಂಡೆ ಹಾಗೂ ಸುತ್ತಲಿನ ಪ್ರದೇಶದಲ್ಲಿ ಕುಳಿತು ಪ್ರತಿದಿನ ಸಂಜೆ 5.30 ರಿಂದ 8 ಗಂಟೆಯವರೆಗೆ ರೇಡಿಯೋ ಕಾರ್ಯಕ್ರಮಗಳನ್ನು ಆಲಿಸಬಹುದಾಗಿದೆ.
ಟವರ್ ನ ಹಳೆಯ ಮೂಲ ಸ್ವರೂಪದಲ್ಲಿ ಏನೂ ಬದಲಾವಣೆ ಮಾಡದೆ, ಹೊಸ ಮೈಕ್ ಗಳು ಮತ್ತು ರೇಡಿಯೋ ಅಳವಡಿಸಿದ್ದು, ಕೇಳುಗರಿಗೆ ಹೊಸ ಅನುಭವ ನೀಡಲಿರುವ ಈ ಟವರ್ , ಹೆಚ್ಚು ಕರ್ಕಶವಿಲ್ಲದೇ ಪಾರ್ಕ್ ನೊಳಗಿನ ಕೇಳುಗರಿಗೆ ಮಾತ್ರ ಮಾರ್ಧನಿಸಲಿದೆ.
ಅಜ್ಜರಕಾಡಿನ ‘ಬಿಗಿಲ್,’ ಮತ್ತೆ ಮೊಳಗಲಿದೆ:
ಹಿಂದಿನ ಕಾಲದಲ್ಲಿ ಬೆಳಗ್ಗೆ 8, ಮಧ್ಯಾಹ್ನ 12.30 ಮತ್ತು ರಾತ್ರಿ 8 ಗಂಟೆಗೆ ಒಮ್ಮೆ ಟವರ್ ಮೂಲಕ ಅಲಾರಂ ಮೊಳಗುತಿತ್ತು. ಜನರು ಇದನ್ನು ಬಿಗಿಲ್ ಎಂದೇ ಕರೆಯುತ್ತಿದ್ದರು.
ಗಡಿಯಾರ ಇಲ್ಲದ ಆ ಕಾಲದಲ್ಲಿ ಇಲ್ಲಿ ಮೊಳಗುವ ಬಿಗಿಲ್ (ಅಲಾರಾಂ) ಜನರಿಗೆ ಘಂಟೆ ತಿಳಿಸುತಿತ್ತು. ಸುಮಾರು 3-4 ಕಿಲೋಮೀಟರ್ ದೂರದ ವರೆಗೂ ಅದು ಕೇಳಿಸುತಿತ್ತು ಎಂದು ಹಿರಿಯರು ನೆನಪಿಸಿಕೊಳ್ಳುತ್ತಾರೆ.
ಈಗ ಜನರಿಗೆ ಆ ಬಿಗಿಲ್ ನ ಅನುಭವ ಮತ್ತೆ ಬರಲಿದೆ. ಹಿಂದಿನಂತೆ ಬೆಳಗ್ಗೆ 8, ಮಧ್ಯಾಹ್ನ 12.30 ಮತ್ತು ರಾತ್ರಿ 8 ಗಂಟೆಗೆ ಬಿಗಿಲ್ ಮೊಳಗಲಿದೆ.