ಕೋವಿಡ್ ನಿಯಂತ್ರಣಕ್ಕೆ ಲಸಿಕೆ ಪಡೆಯುವುದೇ ಮದ್ದು: ಡಾ. ಕೆ. ಸುಧಾಕರ್
ಮಂಗಳೂರು, ಮಾರ್ಚ್ 31, 2021: ರಾಜ್ಯದಲ್ಲಿ ಕೋವಿಡ್ ನಿಯಂತ್ರಣಕ್ಕೆ ರೋಗ ನಿರೋಧಕ ಲಸಿಕೆ ಪಡೆಯುವುದೇ ಮದ್ದು, ಇದನ್ನು ಪ್ರತಿಯೊಬ್ಬರು ತೆಗೆದುಕೊಳ್ಳಬೇಕು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ತಿಳಿಸಿದರು.
ಅವರು ಇಂದು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಜಿಲ್ಲೆಯ ಆರೋಗ್ಯ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜಿಲ್ಲೆಯಲ್ಲಿ 35,607 ಕೊವಿಡ್ ಕೇಸ್‍ಗಳು ಆಗಿದ್ದು, ಪ್ರಸ್ತುತ 579 ಪ್ರಕರಣಗಳು ಸಕ್ರೀಯವಾಗಿದೆ. ಕಳೆದ 15 ದಿನಗಳಿಂದ ಪ್ರತಿದಿನ 60-70 ಕೇಸ್‍ಗಳು ಕಂಡು ಬರುತ್ತಿವೆ. ದಿನವೊಂದಕ್ಕೆ ಜಿಲ್ಲೆಯಲ್ಲಿ 3,000 ಕೊವೀಡ್ ಪರೀಕ್ಷೆಗಳು ಕಡ್ಡಾಯವಾಗಿ ಮಾಡುವುದರೊಂದಿಗೆ ರೋಗಿಗಳನ್ನು ಗುರುತಿಸಿ ಅವರನ್ನು ಇತರರೊಂದಿಗೆ ಪ್ರತ್ಯೇಕಿಸಿ ಸೂಕ್ತ ಚಿಕಿತ್ಸೆ ಕೊಡಬೇಕು.
ಕೋವಿಡ್ ಮಾರ್ಗಸೂಚಿಗಳಾದ ಸಾಮಾಜಿಕ ಅಂತರ, ಮಾಸ್ಕ್ ಧರಿಸುವುದು ಮತ್ತು ಸ್ವಚ್ಚತೆಗೆ ಆದ್ಯತೆ ನೀಡುವುದು ಸೇರಿದಂತೆ ಮತ್ತಿತರ ಕಾರ್ಯಗಳ ಬಗ್ಗೆ ಜನ ಸಾಮಾನ್ಯರಲ್ಲಿ ಹೆಚ್ಚಿನ ಅರಿವು ಮೂಡಿಸಬೇಕು.
ಜಿಲ್ಲೆಯ ಎಲ್ಲಾ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಕಾಂಪೌಂಡ್ ವಾಲ್‍ಗಳ ನಿರ್ಮಾಣ ಕಾರ್ಯವನ್ನು ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿ ಕೈಗೊಳ್ಳಬೇಕು. ಈಗಾಗಲೇ ನಿರ್ಮಾಣಗೊಂಡಿದ್ದರೆ, ಬಾಕಿ ಉಳಿದ ಆರೋಗ್ಯ ಕೇಂದ್ರಗಳಲ್ಲಿ 6 ತಿಂಗಳಲ್ಲಿ ನಿರ್ಮಿಸುವುದರೊಂದಿಗೆ ಕೈ ತೋಟಗಳನ್ನು ಬೆಳೆಸಬೇಕು. ಕೈ ತೋಟಗಳಲ್ಲಿ ಹೆಚ್ಚಾಗಿ ಔಷಧಿ ಗಿಡಗಳನ್ನು ಬೆಳೆಸಲು ಅರಣ್ಯ ಇಲಾಖೆ, ಸಾಮಾಜಿಕ ಅರಣ್ಯ ಇಲಾಖೆ ಮತ್ತು ತೋಟಗಾರಿಕೆ ಇಲಾಖೆಯ ಸಹಕಾರ ಪಡೆಯಬೇಕೆಂದು ವೈಧ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯಕೀಯ ಚಿಕಿತ್ಸೆ ಹರಸಿ ಬರುವ ರೊಗಿಗಳಿಗೆ ಉತ್ತಮ ಆರೋಗ್ಯ ಸೌಲಭ್ಯಗಳನ್ನು ಒದಗಿಸುವ ಜೊತೆಗೆ ಇತರೆ ಮೂಲಭೂತ ಸೌಕರ್ಯಗಳನ್ನು ಸಹ ಕಲ್ಪಿಸಬೇಕು, ಹಿರಿಯ ನಾಗರಿಕರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಎಲ್ಲಾ ತಾಲೂಕು ಆಸ್ಪತ್ರೆಯ ಶೌಚಾಲಯಗಳಲ್ಲಿ ವೆಸ್ಟರ್ನ್ ಶೈಲಿಯ ಶೌಚಾಲಯ ಸೌಲಭ್ಯಗಳನ್ನು ಒದಗಿಸಬೇಕು ಎಂದರು.
ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರ ಆಸ್ಪತ್ರೆಗಳಲ್ಲಿ ಕೊರತೆ ಇರುವ ಎ.ಎನ್.ಎಮ್ ಗಳು ಲ್ಯಾಬ್ ಟೆಕ್ನೀಷಿಯನ್ಸ್ ಗಳು ಸೇರಿದಂತೆ ಮತ್ತಿತರ ಅರೆ ವೈದ್ಯಕೀಯ ಸಿಬ್ಬಂದಿಗಳನ್ನು ನೇಮಿಸಲಾಗುವುದು. ಜಿಲ್ಲೆಯಲ್ಲಿ 22 ಲಕ್ಷಕ್ಕೂ ಹೆಚ್ಚಿನ ಜನಸಂಖ್ಯೆ ಇದ್ದು, ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಕಾರ್ಡ್‍ನ್ನು 8.55 ಲಕ್ಷ ಜನರಿಗೆ ವಿತರಣೆ ಆಗಿದೆ.
ಕೇಂದ್ರ ಸರ್ಕಾರ ಜನರಿಗೆ ಉತ್ತಮ ಆರೋಗ್ಯ ಸೌಲಭ್ಯವನ್ನು ಕಲ್ಪಿಸಬೇಕೆಂಬ ಮಹತ್ವಾಕಾಂಕ್ಷೆ ಯೋಜನೆಯಲ್ಲೊಂದಾದ ಈ ಯೋಜನೆಯನ್ನು ಎಲ್ಲಾ ಅರ್ಹ ಅಭ್ಯರ್ಥಿಗಳು ಸದುಪಯೋಗ ಪಡೆಸಿಕೊಳ್ಳುವಂತೆ ನೋಡಿಕೊಳ್ಳಬೇಕು ಎಂದು ಸೂಚನೆ ನೀಡಿದರು.
ಜಿಲ್ಲಾ ಹಾಗೂ ತಾಲೂಕು ಆಸ್ಪತೆಗಳು ಸೇರಿದಂತೆ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಎ.ಬಿ-ಎ.ಆರ್.ಕೆ ಯನ್ನು ಕಡ್ಡಾಯವಾಗಿ ನೋಂದಣಿ ಮಾಡಿಕೊಳ್ಳಬೇಕು. ಇದರಿಂದಾಗಿ ಹೆಚ್ಚಿನ ಆರ್ಥಿಕ ಲಾಭವನ್ನು ಸರ್ಕಾರಿ ಆಸ್ಪತ್ರೆಗಳು ಪಡೆದುಕೊಳ್ಳುವುದರೊಂದಿಗೆ ಮುಂದಿನ ದಿನಗಳಲ್ಲಿ ಆಸ್ಪತ್ರೆಗಳು ಆರ್ಥಿಕವಾಗಿ ಸ್ವಾವಲಂಬನೆಯಾಗುವುದರೊಂದಿಗೆ ಅಭಿವೃದ್ಧಿ ಕಾರ್ಯಗಳನ್ನು ಮಾಡಲು ಅನುಕೂಲವಾಗುತ್ತದೆ ಎಂದರು.
ರಾಜ್ಯದಲ್ಲಿಯೇ ಮಂಗಳೂರಿನ ವೆನ್‍ಲಾಕ್ ಆಸ್ಪತ್ರೆ ಹಾಗೂ ದಾವಣಗೆರೆಯ ಚಿಗಟೇರಿ ಆಸ್ಪತ್ರೆಗಳನ್ನು ಖಾಸಗಿ ವೈದ್ಯಕೀಯ ವಿದ್ಯಾಸಂಸ್ಥೆಗಳು ವೈದ್ಯಕೀಯ ಸೇವೆ ಒದಗಿಸುತ್ತಿವೆ. ಬಾಕಿ ಉಳಿದ ಇತರೆ ಎಲ್ಲಾ ಸಂಸ್ಥೆಗಳು ತಮ್ಮದೇ ವೈದ್ಯಕೀಯ ಆಸ್ಪತ್ರೆಗಳನ್ನು ಮಾರ್ಗಸೂಚಿಯನ್ವಯ ಹೊಂದಿದೆ ಎಂದ ಅವರು, ಇಲ್ಲಿನ ವೆನ್‍ಲಾಕ್ ಆಸ್ಪತ್ರೆಯ ಒಪ್ಪಂದದ ಅನ್ವಯ ಎಲ್ಲಾ ಷರತ್ತುಗಳನ್ನು ವೈದ್ಯಕೀಯ ವಿದ್ಯಾ ಸಂಸ್ಥೆಯು ಪಾಲಿಸುವುದರೊಂದಿಗೆ ವೈದ್ಯಕೀಯ ಸೇವೆ ಒದಗಿಸಬೇಕು ಎಂದರು.
ಜಿಲ್ಲೆಯಲ್ಲಿ 10ಕ್ಕೂ ಹೆಚ್ಚು ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಆಧುನೀಕರಣಗೊಳಿಸಲು ಸರ್ಕಾರ ಮುಂದಾಗಿದೆ, ಜಿಲ್ಲೆಯಲ್ಲಿ 2 ಎಕರೆಗಿಂತ ಹೆಚ್ಚು ವಿಸ್ತೀರ್ಣ ಹೊಂದಿರುವ ಪಿ.ಹೆಚ್.ಸಿ ಗಳ ಮಾಹಿತಿಯನ್ನು ಒದಗಿಸಬೇಕು ಎಂದು ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಖಾಸಗಿ ವೈದ್ಯಕೀಯ ಆಸ್ಪತ್ರೆಗಳನ್ನು ಕೆ.ಪಿ.ಎಂ.ಇ ಅಡಿಯಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಬೇಕು. ನೋಂದಣಿ ನಂತರದಲ್ಲಿ ನ್ಯೂನ್ಯತೆಗಳು ಕಂಡುಬಂದಲ್ಲಿ ಅಂತಹ ಆಸ್ಪತ್ರೆಗಳ ಲೈಸೆನ್ಸ್ ಅನ್ನು ರದ್ದುಪಡಿಸಬೇಕು.
ಜಿಲ್ಲೆಯಲ್ಲಿ ರಕ್ತದೊತ್ತಡ ಮತ್ತು ಮಧುಮೇಹ ಕಾಯಿಲೆಗಳಿಂದ ಬಳಲುತ್ತಿರುವವರನ್ನು ಗುರುತಿಸುವುದರೊಂದಿಗೆ ಅವರುಗಳಿಗೆ ಅಗತ್ಯ ವೈದ್ಯಕೀಯ ಸೌಲಭ್ಯ ಕಲ್ಪಿಸಬೇಕು ಎಂದ ಅವರು, 2025 ರೊಳಗೆ ಕ್ಷಯರೋಗವನ್ನು ದೇಶದಿಂದ ನಿರ್ಮೂಲನೆ ಮಾಡಲು ಈಗಾಗಲೇ ಪಣ ತೊಡಲಾಗಿದೆ. ಇದರ ಅನುಷ್ಟಾನಕ್ಕೆ ಅಧಿಕಾರಿಗಳು ಕಾರ್ಯ ಪ್ರವೃತ್ತರಾಗುವುದರೊಂದಿಗೆ ಈ ರೋಗವನ್ನು ಓಡಿಸಲು ಮುಂದಾಗಬೇಕು ಎಂದರು.
ಖಾಸಗಿ ವೈದ್ಯಕೀಯ ಸಂಸ್ಥೆಗಳು ಕ್ಷಯರೋಗದ ಚಿಕಿತ್ಸೆಗಾಗಿ ಬರುವವರ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾಹಿತಿಯನ್ನು ತಪ್ಪದೇ ಕೊಡಬೇಕು. ಇಲ್ಲದಿದ್ದಲ್ಲಿ ಅಂತಹ ಆಸ್ಪತ್ರೆಗಳ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ತೆಗೆದುಕೊಳ್ಳಲು ಮುಂದಾಗಬೇಕು.
ಸಭೆಯಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಧರ್ಮದಾಯಾ ದತ್ತಿ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದ ನಳೀನ್ ಕುಮಾರ್ ಕಟೀಲ್, ಜಿಲ್ಲಾ ಪಂಚಾಯತ್ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಶಾಸಕ ರಾಜೇಶ್ ನಾಯ್ಕ್, ಜಿಲ್ಲಾಧಿಕಾರಿ ಡಾ. ರಾಜೇಂದ್ರ. ಕೆ. ವಿ, ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಡಾ. ಕುಮಾರ್, ಪೊಲೀಸ್ ಅಧೀಕ್ಷಕ ಲಕ್ಷ್ಮೀ ಪ್ರಸಾದ್, ಮಹಾನಗರ ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ, ಉಪಮೇಯರ್ ಸುಮಂಗಲಾ ರಾವ್, ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಹಾಗೂ ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.