ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳ ಆರೋಗ್ಯ ವೃದ್ಧಿಗೆ ಕ್ರಮ: ಡಾ.ಕೆ.ಸುಧಾಕರ್

 ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳ ಆರೋಗ್ಯ ವೃದ್ಧಿಗೆ ಕ್ರಮ: ಡಾ.ಕೆ.ಸುಧಾಕರ್
Share this post

ಬೆಂಗಳೂರು, ಆ 18, 2021: ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಮಕ್ಕಳನ್ನು ಗುರುತಿಸಿದ್ದು, ಅವರ ಆರೋಗ್ಯ ವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಜಿಲ್ಲೆಯಲ್ಲಿ ಕೋವಿಡ್ ಸ್ಥಿತಿಗತಿ ಪರಿಶೀಲನೆ ಸಂಬಂಧ ಸಭೆ ನಡೆಸಿದ ಬಳಿಕ ಮಾತನಾಡಿದ ಸಚಿವರು, ತಾಂತ್ರಿಕ ಸಲಹಾ ಸಮಿತಿ ಸಲಹೆಯಂತೆ ಸಂಭವನೀಯ ಕೋವಿಡ್ ಮೂರನೇ ಅಲೆ ನಿಯಂತ್ರಣಕ್ಕೆ ಸಿದ್ಧತೆ ನಡೆದಿದೆ. ಜಿಲ್ಲೆಯಲ್ಲಿ ಪಾಸಿಟಿವಿಟಿ ದರ ಕಡಿಮೆ ಇದ್ದು, ಈವರೆಗೆ 148 ಪ್ರಕರಣ ಕಂಡುಬಂದಿದೆ. ಹೆಚ್ಚಿನವರನ್ನು ಕೋವಿಡ್ ಕೇರ್ ಕೇಂದ್ರಕ್ಕೆ ಸೇರಿಸಬೇಕು, ಪರೀಕ್ಷೆ ಕಡಿಮೆ ಮಾಡುವುದು ಬೇಡ ಎಂದು ಸೂಚಿಸಲಾಗಿದೆ. ಹಲವು ಮಕ್ಕಳಿಗೆ ಆರೋಗ್ಯ ತಪಾಸಣೆ ಮಾಡಿದ್ದು, ಅವರಲ್ಲಿ ಶ್ವಾಸಕೋಶದ ತೊಂದರೆ, ರಕ್ತಹೀನತೆ, ಮೂತ್ರಪಿಂಡದ ಸಮಸ್ಯೆ, ಅಪೌಷ್ಠಿಕತೆ ಕಂಡುಬಂದಿದೆ. ಹೀಗೆ ಗುರುತಿಸಿದ ಮಕ್ಕಳಿಗೆ ಅಗತ್ಯ ಚಿಕಿತ್ಸೆ ನೀಡಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಇನ್ನು ಒಂದೇ ವಾರದಲ್ಲಿ ‘ಆರೋಗ್ಯ ನಂದನ’ ಕಾರ್ಯಕ್ರಮವನ್ನು ಮುಖ್ಯಮಂತ್ರಿಯವರು ಉದ್ಘಾಟಿಸಲಿದ್ದು, ರಾಜ್ಯದ ಒಂದೂವರೆ ಕೋಟಿ ಮಕ್ಕಳಿಗೆ ಆರೋಗ್ಯ ತಪಾಸಣೆ ಮಾಡಲಾಗುವುದು. ರೋಗ ನಿರೋಧಕ ಶಕ್ತಿ ಕಡಿಮೆ ಇರುವವರಿಗೆ ವಿಶೇಷ ಆರೈಕೆ, ಚಿಕಿತ್ಸೆ ನೀಡಿ ಅವರನ್ನು ರಕ್ಷಿಸುವ ಕೆಲಸ ಮಾಡುತ್ತೇವೆ. ಜಿಲ್ಲೆಯಲ್ಲಿ 48% ರಷ್ಟು ಜನರಿಗೆ ಮೊದಲ ಡೋಸ್ ಕೋವಿಡ್ ಲಸಿಕೆ ನೀಡಲಾಗಿದೆ. ಹೆಚ್ಚು ಲಸಿಕೆಯನ್ನು ಇಲ್ಲಿಗೆ ಪೂರೈಕೆ ಮಾಡಿ ವೇಗ ನೀಡಲಾಗುವುದು. ಡಿಸೆಂಬರ್ ಅಂತ್ಯದೊಳಗೆ ಎಲ್ಲರಿಗೂ ಲಸಿಕೆ ನೀಡಲಾಗುವುದು ಎಂದರು.

ಈ ಜಿಲ್ಲೆಯಲ್ಲಿ ಹೊಸ ಜಿಲ್ಲಾಕೇಂದ್ರ ಇನ್ನೂ ಅಂತಿಮ ಆಗಿಲ್ಲ. ಮುಖ್ಯಮಂತ್ರಿಗಳೊಂದಿಗೆ ಈ ಬಗ್ಗೆ ಚರ್ಚಿಸಿ ಆದಷ್ಟು ಬೇಗ ನಿಗದಿಪಡಿಸಲಾಗುವುದು. ಹಾಗೆಯೇ ಜಿಲ್ಲಾಸ್ಪತ್ರೆಯನ್ನೂ ನಿರ್ಮಿಸಲಾಗುವುದು. ಒಂದು ಅಥವಾ ಎರಡು ತಾಯಿ ಮತ್ತು ಶಿಶು ಆಸ್ಪತ್ರೆಯನ್ನು ಇದೇ ವರ್ಷ ನಿರ್ಮಿಸಲು ಕ್ರಮ ಕೈಗೊಳ್ಳಲಾಗುವುದು. 142 ಉಪಕೇಂದ್ರಗಳನ್ನು ಆರೋಗ್ಯ ಮತ್ತು ಕ್ಷೇಮ ಕೇಂದ್ರವಾಗಿ ಮೇಲ್ದರ್ಜೆಗೇರಿಸಲಾಗುತ್ತಿದೆ. ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಕನಿಷ್ಠ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಲಾಗುವುದು. ಈಗಾಗಲೇ 29 ವೈದ್ಯರನ್ನು ಜಿಲ್ಲೆಗೆ ನೀಡಲಾಗಿದೆ. ಆದ್ದರಿಂದ ಯಾವುದೇ ವೈದ್ಯರ ಕೊರತೆ ಇಲ್ಲ. ಇನ್ನಷ್ಟು ಆರೋಗ್ಯ ಮೂಲಸೌಕರ್ಯಕ್ಕೆ ಭೂಮಿ ಮೀಸಲಿಟ್ಟಿದ್ದು, ಇಲ್ಲಿ ಅಭಿವೃದ್ಧಿ ಕಾರ್ಯದ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದರು.

ಹಬ್ಬ, ಜಾತ್ರೆ, ಸಭೆ ಸಮಾರಂಭಗಳಲ್ಲಿ ಹೆಚ್ಚು ಜನ ಸೇರಬಾರದು. ಕೋವಿಡ್ ನ ಎರಡೂ ಲಸಿಕೆ ಪಡೆಯುವವರೆಗೆ ಎಚ್ಚರವಾಗಿರಬೇಕು. ಶಾಲೆ ಆರಂಭ ಸಂಬಂಧ ಮಾರ್ಗಸೂಚಿ ನೀಡಲಾಗಿದೆ. ಶಿಕ್ಷಣ ಇಲಾಖೆ ಇದನ್ನು ಆಯಾ ಜಿಲ್ಲಾಡಳಿತಕ್ಕೆ ನೀಡಿದೆ. ಮಕ್ಕಳ ಆರೋಗ್ಯ ಕಾಪಾಡುವುದರ ಜೊತೆಗೆ ಭವಿಷ್ಯ ರೂಪಿಸುವುದು ಕೂಡ ಮುಖ್ಯ. ಅದನ್ನು ಸಮರ್ಥವಾಗಿ ನಿಭಾಯಿಸಬೇಕಿದೆ. ಶಾಲಾ ಸಿಬ್ಬಂದಿಗೆ ಲಸಿಕೆಯನ್ನೂ ನೀಡಲಾಗಿದೆ. ಎಲ್ಲರ ಅಭಿಪ್ರಾಯ ಪಡೆದು ಈ ಕ್ರಮವನ್ನು ಸರ್ಕಾರ ಕೈಗೊಂಡಿದೆ ಎಂದರು.

Subscribe to our newsletter!

Other related posts

error: Content is protected !!