ಕೋವಿಡ್ ನಿಯಂತ್ರಣಕ್ಕೆ ಸ್ಥಳೀಯ ಸಮಿತಿಗಳು ಮುಂದಾಗಬೇಕು: ಕೋಟ ಶ್ರೀನಿವಾಸ ಪೂಜಾರಿ

 ಕೋವಿಡ್ ನಿಯಂತ್ರಣಕ್ಕೆ ಸ್ಥಳೀಯ ಸಮಿತಿಗಳು ಮುಂದಾಗಬೇಕು: ಕೋಟ ಶ್ರೀನಿವಾಸ ಪೂಜಾರಿ
Share this post

ಮಂಗಳೂರು, ಮೇ 07, 2021: ಜಿಲ್ಲೆಯಲ್ಲಿ ಹೋಂ ಐಸೋಲೇಟ್ ಆಗಿರುವ ಕೋವಿಡ್ ಸೋಂಕಿತರು ತಮ್ಮ ಮನೆಯಲ್ಲಿ ಪ್ರತ್ಯೇಕವಾಗಿ ಇದ್ದು ಚಿಕಿತ್ಸೆ ಪಡೆಯಲು ಸಾಧ್ಯವಾಗದಿದ್ದರೆ, ಅಂಥವರನ್ನು ತಕ್ಷಣ ಕೋವಿಡ್ ಕೇರ್  ಸೆಂಟರ್ ಗಳಿಗೆ ವರ್ಗಾಯಿಸುವ ಕೆಲಸ ಗ್ರಾಮಮಟ್ಟದ ಟಾಸ್ಕ್ ಪೋರ್ಸ್ ಸಮಿತಿಗಳು ಹಾಗೂ ವಾರ್ಡ್ ಸಮಿತಿಗಳು ಮಾಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಅವರು ಇಂದು ಉಳ್ಳಾಲದ ನಗರಸಭೆ ಸಭಾಂಗಣದಲ್ಲಿ ಕೋವಿಡ್ ನಿಯಂತ್ರಣ ಕುರಿತು ತೆಗೆದುಕೊಳ್ಳುವ ಕ್ರಮಗಳ ಬಗ್ಗೆ ನಡೆದ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕೋವಿಡ್ ಸೋಂಕಿತರು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿದ್ದರೆ ಅವರು ಪ್ರತ್ಯೇಕ ಕೋಣೆಯಲ್ಲಿ ಇರುವ ಬಗ್ಗೆ ಖಾತರಿಪಡಿಸಿಕೊಳ್ಳಬೇಕು. ಕೋವಿಡ್ ಸೋಂಕಿತರನ್ನು ಪ್ರತ್ಯೇಕವಾಗಿರಲು ಸಾಧ್ಯವಾಗದ ಸ್ಥಿತಿ ಇದ್ದರೆ ಅಂಥಹಾ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್‍ಗೆ ದಾಖಲು ಮಾಡಿ. ಸೋಂಕಿತರು ಮುನ್ನೆಚ್ಚರಿಕೆ ತೆಗೆದುಕೊಳ್ಳದೇ ಇರುವುದರಿಂದ  ಮನೆಗಳಲ್ಲಿರುವ ಇತರೆ ಬಹಳಷ್ಟು ಜನರಿಗೆ ಸೋಂಕು ಹರಡಿಸುವುದರ ಜೊತೆಗೆ ನೆರೆಹೊರೆಯವರಿಗೂ ರೋಗ ಹರಡುವ ಸಾಧ್ಯತೆ ಇರುತ್ತದೆ ಈ ಬಗ್ಗೆ ಎಚ್ಚರವಹಿಸಬೇಕು ಎಂದರು.

ಗ್ರಾಮ ಪಂಚಾಯಿತಿ ಮಟ್ಟದ ಟಾಸ್ಕ್ ಫೆÇೀರ್ಸ್ ಸಮಿತಿಗಳು ಹಾಗೂ ವಾರ್ಡ್ ಸಮಿತಿಗಳು ಪ್ರತಿದಿನ ಬೆಳಗ್ಗೆ 9 ಗಂಟೆಗೆ ಸಭೆ ನಡೆಸಬೇಕು, ಗ್ರಾಮ ಪಂಚಾಯಿತಿ ಅಥವಾ ವಾರ್ಡ್ ವ್ಯಾಪ್ತಿಯ ಪ್ರಾರ್ಥಮಿಕ ಆರೋಗ್ಯ ಕೇಂದ್ರಗಳಿಗೆ ಸೋಂಕು ದೃಢಪಟ್ಟಿರುವ ಬಗ್ಗೆ ಬಂದಿರುವ ವರದಿಯನ್ನು ಪಡೆದು ಏನೆಲ್ಲ ಕ್ರಮಗಳು ತೆಗೆದುಕೊಳ್ಳಬೇಕೆಂಬ ಬಗ್ಗೆ ಚರ್ಚಿಸಿ  ಕ್ರಮವಹಿಸಬೇಕು ಎಂದರು.

ಕೋವಿಡ್ ನಿಯಂತ್ರಣಕ್ಕೆ ಸರ್ಕಾರ ಹೊರಡಿಸಿರುವ ಮಾರ್ಗಸೂಚಿಗಳನ್ನು ಚಾಚೂ ತಪ್ಪದೇ ಜಾರಿಗೆ ತರುವ ಕೆಲಸವನ್ನು ಅಧಿಕಾರಿಗಳು ಜವಾಬ್ದಾರಿಯುತವಾಗಿ ಮಾಡುವುದರೊಂದಿಗೆ ಕೋವಿಡ್ ನಿಯಂತ್ರಣಕ್ಕೆ ಮುಂದಾಗಬೇಕು ಎಂದರು.

ಕೋವಿಡ್ ಸೋಂಕಿನಿಂದ ಮರಣ ಹೊಂದಿದವರ ಅಂತ್ಯಸಂಸ್ಕಾರ ಕೈಗೊಳ್ಳಲು ಅಗತ್ಯವಿರುವ ಜಾಗವನ್ನು ಗುರುತಿಸಿ ಇಡಬೇಕು ಎಂದು ಹೇಳಿದರು.

ಶಾಸಕ ಯು ಟಿ ಖಾದರ್ ಮಾತನಾಡಿ, ಆರೋಗ್ಯದಲ್ಲಿ ಸಣ್ಣಪುಟ್ಟ ಸಮಸ್ಯೆ ಉಂಟಾಗಿ ಕೋವಿಡ್ ಪರೀಕ್ಷೆಗೆ ಒಳಪಟ್ಟು ಅದರ ಫಲಿತಾಂಶ ಬರುವವರೆಗೂ ಹೋಮ್ ಕ್ವಾರಂಟೈನ್ ನಲ್ಲಿ ಇರುವ ಹಾಗೆ ಎಚ್ಚರವಹಿಸಬೇಕು ಎಂದ ಅವರು ಕೋವಿಡ್ ಸೊಂಕು ದೃಢಪಟ್ಟು ಮನೆಯಲ್ಲಿಯೇ ಚಿಕಿತ್ಸೆ ಪಡೆಯುತ್ತಿರುವವರಿಗೆ ಪ್ರತಿದಿನ ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಸಿಬ್ಬಂದಿಗಳು ಅವರುಗಳ ಯೋಗಕ್ಷೇಮವನ್ನು ವಿಚಾರಿಸಬೇಕು. ಕೋವಿಡ್ ಕೇರ್ ಸೆಂಟರ್ಗೆ ವರ್ಗಾಯಿಸುವುದು ಅವಶ್ಯವೆಂದು ಕಂಡುಬಂದಲ್ಲಿ ಅಂತವರನ್ನು ಮನವೊಲಿಸಿ ಕೋವಿಡ್ ಕೇರ್ ಸೆಂಟರ್ ಗೆ ವರ್ಗಾಹಿಸಬೇಕು ಎಂದರು.

ಕೋವಿಡ್ ಸೋಂಕಿತರಿಗೆ ಅವಶ್ಯವಿರುವ ಔಷಧೋಪಕರಣಗಳನ್ನು ಮನೆಗಳಿಗೆ ತಲುಪಿಸುವ ಕಾರ್ಯವನ್ನು ಆಶಾಕಾರ್ಯಕರ್ತೆಯರು ಮಾಡಬೇಕು ಎಂದ ಅವರು ಕೋವಿಡ್‍ನಿಂದ ಮರಣ ಹೊಂದಿದವರ ಅಂತ್ಯ ಸಂಸ್ಕಾರ ಕೈಗೊಳ್ಳಲು ಅಗತ್ಯವಿರುವ ಭೂಮಿಯನ್ನು ಗುರುತಿಸಿ ಸ್ಥಳ ನಿಗಧಿಪಡಿಸಬೇಕು ಎಂದರು.

ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆವಿ ಮಾತನಾಡಿ, ಕೇರಳದಲ್ಲಿ ಲಭ್ಯವಿಲ್ಲದ ಅನಿವಾರ್ಯವಾಗಿರುವ ಚಿಕಿತ್ಸೆಗಳಿಗೆ ಮಾತ್ರ ಮಂಗಳೂರು ಪ್ರವೇಶಕ್ಕೆ ಅನುಮತಿ ನೀಡಲಾಗಿದ್ದು, ತೀವ್ರವಲ್ಲದ ಚಿಕಿತ್ಸೆಗೆಂದು ಮಂಗಳೂರು ಪ್ರವೇಶಕ್ಕೆ ಯಾವುದೇ ಅವಕಾಶ ಇರುವುದಿಲ್ಲ ಎಂದರು.

ಗ್ರಾಮ ಮಟ್ಟದಲ್ಲಿ ಹಾಗೂ ತಾಲೂಕು ಮಟ್ಟದಲ್ಲಿ ನಿಯೋಜಿಸಿರುವ ಅಧಿಕಾರಿಗಳು ಸೂಕ್ಷ್ಮವಾಗಿ ಆಸಕ್ತಿ ತೆಗೆದುಕೊಂಡು ಕೋವಿಡ್ ಹರಡುವುದನ್ನು ತಡೆಗಟ್ಟುವ ಕೆಲಸ ಮಾಡಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕುಮಾರ್, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಜಿಲ್ಲಾ ಆರೋಗ್ಯಾಧಿಕಾರಿ ಡಾ. ಕಿಶೋರ್, ತಾಲೂಕು ವೈದ್ಯಾಧಿಕಾರಿ ಡಾ. ಸುಜಯ್, ಉಳ್ಳಾಲ ನಗರಸಭಾ ಅಧ್ಯಕ್ಷೆ ಚಿತ್ರಕಲಾ, ಉಪಾಧ್ಯಕ್ಷ ಆಯುಬ್ ಮಂಚಿಲ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

Subscribe to our newsletter!

Other related posts

error: Content is protected !!