ಮಾಸ್ಕ್ ಜಾಗೃತಿ: ಉಡುಪಿ ಜಿಲ್ಲಾಧಿಕಾರಿಗಳಿಂದ ದಿಡೀರ್ ದಾಳಿ

 ಮಾಸ್ಕ್ ಜಾಗೃತಿ: ಉಡುಪಿ ಜಿಲ್ಲಾಧಿಕಾರಿಗಳಿಂದ ದಿಡೀರ್ ದಾಳಿ
Share this post

ಉಡುಪಿ ಎಪ್ರಿಲ್ 19, 2021: ಜಿಲ್ಲೆಯಲ್ಲಿಯೂ ಕೋವಿಡ್ ಎರಡನೇ ಅಲೆ ಹರಡುತ್ತಿದ್ದು, ಸಾರ್ವಜನಿಕರು ಸರ್ಕಾರದ ಸೂಚನೆಯ ನಂತರವೂ ಸಾರ್ವಜನಿಕ ಸ್ಥಳದಲ್ಲಿ ಮಾಸ್ಕ್ ಧರಿಸದೇ ಸಂಚರಿಸುತ್ತಿರುವ ಕುರಿತು ಜಾಗೃತಿ ಮೂಡಿಸಿ ದಂಡ ವಿಧಿಸಲು ಜಿಲ್ಲಾಧಿಕಾರಿ ಜಿ.ಜಗದೀಶ್ ಇಂದು ಸಂಜೆ ಸಂತೆಕಟ್ಟೆಯಲ್ಲಿ ದಿಢೀರ್ ದಾಳಿ ನಡೆಸಿದರು.

ಬಸ್ ಗಳಲ್ಲಿ ನಿಗಧಿತ ಆಸನ ಸಂಖ್ಯೆಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ 5 ಬಸ್ ಗಳ ಚಾಲಕರು, ನಿರ್ವಾಹಕರಿಂದ ದಂಡ ವಸೂಲಿ ಮಾಡಿದ ಜಿಲ್ಲಾಧಿಕಾರಿಗಳು, ಹಾಗೂ ಬಸ್ ಮಾಲೀಕರ ವಿರುದ್ದ ಪ್ರಕರಣ ದಾಖಲಿಸುವಂತೆ ಸೂಚಿಸಿದರು.

ಬಸ್ ಗಳಲ್ಲಿ ನಿಂತು ಪ್ರಯಾಣಿಸುತ್ತಿದ್ದ ಪ್ರಯಾಣಿಕರನ್ನು ಕೆಳಗಿಳಿಸಿದ ಜಿಲ್ಲಾದಿಕಾರಿಗಳು ಅವರೆಲ್ಲರಿಗೂ ಟಿಕೆಟ್ ನ ಮೊತ್ತವನ್ನು ಹಿಂತಿರುಗಿಸುವಂತೆ ಕಂಡಕ್ಟರ್ ಗೆ ಸೂಚಿಸಿ, ಸರ್ಕಾರದ ಆದೇಶವಿದ್ದರೂ ಹೆಚ್ಚಿನ ಜನರನ್ನು ಕರೆದೊಯ್ಯುತ್ತಿದ್ದ ಚಾಲಕ ಮತ್ತು ನಿರ್ವಾಹಕರನ್ನು ತೀವ್ರ ತರಾಟೆಗೆ ತೆಗೆದುಕೊಂಡರು. ಪ್ರಯಾಣಿಕರಿಗೂ ಸಹ ಬುದ್ದಿವಾದ ಹೇಳಿದ ಡಿಸಿ , ಬಸ್ ನಲ್ಲಿ ಸೀಟ್ ಇಲ್ಲವಾದಲ್ಲಿ ನಂತರದ ಬಸ್ ನಲ್ಲಿ ಸಂಚರಿಸುವಂತೆ ಹೇಳಿದರು.

ಮೆಡಿಕಲ್ ಶಾಪ್ ಒಂದರಲ್ಲಿ ಮಾಸ್ಕ್ ಧರಿಸದೇ ಇದ್ದ ಸಿಬ್ಬಂದಿಗಳಿಂದ ದಂಡ ವಸೂಲಿ ಮತ್ತು ಅಂಗಡಿಗೂ ದಂಡ ವಿಧಿಸಲಾಯಿತು, ಕ್ಲಿನಿಕ್ ಒಂದರಲ್ಲಿ ಮಾಸ್ಕ್ ಧರಿಸದೇ ಇದ್ದ ರೋಗಿಯ ಸಂಬಂಧಿಕನಿಗೂ ದಂಡ ವಿಧಿಸಲಾಯಿತು. ಸಹಕಾರಿ ಸಂಘವೊಂದರಲ್ಲಿ ಮಾಸ್ಕ್ ಇಲ್ಲದೇ ಕುಳಿತಿದ್ದ ಸಿಬ್ಬಂದಿಗಳಿಗೆ ಹಾಗೂ ಸಂಘದ ಹೆಸರಿನಲ್ಲಿಯೂ ದಂಡ ವಸೂಲಿ ಮಾಡಲಾಯಿತು. ಬಸ್ ನಿಲ್ದಾಣದಲ್ಲಿ ಮಾಸ್ಕ್ ಇಲ್ಲದೆ ನಿಂತಿದ್ದ ದಂಪತಿಗಳಿಗೂ ದಂಡ ವಿಧಿಸಲಾಯಿತು. ಎಟಿಎಂ ಒಂದರಲ್ಲಿ ಮಾಕ್ಸ್ ಧರಿಸದೇ ಹಣ ತೆಗೆಯುತ್ತಿದ್ದ ಇಬ್ಬರಿಗೂ ದಂಡ ವಿಧಿಸಲಾಯಿತು. ಇದೇ ಸಂದರ್ಭದಲ್ಲಿ ಮಾಸ್ಕ್ ಇಲ್ಲದೇ ನಿಂತಿದ್ದ ವಿದ್ಯಾರ್ಥಿನಿಯೊಬ್ಬಳಿಗೂ ಕೋವಿಡ್ ಕುರಿತು ಜಾಗೃತಿ ಮೂಡಿಸಿದ ಜಿಲ್ಲಾಧಿಕಾರಿಗಳು , ಸ್ವತ: ತಾವೇ ಮಾಸ್ಕ್ ನೀಡಿ ಧರಿಸುವಂತೆ ಸೂಚಿಸಿದರು.

ರಸ್ತೆಯಲ್ಲಿ ಮಾಸ್ಕ್ ಇಲ್ಲದೇ ಸಂಚರಿಸುತ್ತಿದ್ದ ವಾಹನ ಸವಾರರಿಗೂ ದಂಡ ವಿಧಿಸಿದ ಜಿಲ್ಲಾಧಿಕಾರಿಗಳು ಕೋವಿಡ್ ಕುರಿತು ಜಾಗೃತಿ ಮೂಡಿಸಿದರು.

ಜಿಲ್ಲೆಯಲ್ಲಿ ಕೋವಿಡ್ ಎರಡನೇ ಅಲೆಯನ್ನು ನಿಯಂತ್ರಿಸಲು ಜಿಲ್ಲಾಡಳಿತದೊಂದಿಗೆ ಸಾರ್ವಜನಿಕರೂ ಸಹ ಅಗತ್ಯ ಸಹಕಾರ ನೀಡುವಂತೆ ತಿಳಿಸಿದ ಜಿಲ್ಲಾಧಿಕಾರಿಗಳು, ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಪಾಲನೆ ಮತ್ತು ಸ್ಯಾನಿಟೈಸರ್ ಗಳ ಬಳಕೆ ಮಾಡುವುದರ ಜೊತೆಗೆ ಸರ್ಕಾರ ಮತ್ತು ಜಿಲ್ಲಾಡಳಿತ ನೀಡುವ ಆದೇಶಗಳನ್ನು ಪಾಲಿಸುವುದರ ಮೂಲಕ ಕೋವಿಡ್ ಹರಡದಂತೆೆ ಎಚ್ಚರವಹಿಸುವಂತೆ ತಿಳಿಸಿದರು.

ಜಿಲ್ಲಾ ಪಂಚಾಯತ್ ಸಿಇಓ ಡಾ. ನವೀನ್ ಭಟ್, ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ನಗರಸಭೆಯ ಆಯುಕ್ತ ಡಾ, ಉದಯಶೆಟ್ಟಿ. ಉಡುಪಿ ತಾ.ಪಂ ಕಾರ್ಯನಿರ್ವಹಣಾಧಿಕಾರಿ ಮೋಹನ್ ರಾಜ್ ಮತ್ತಿತರರು ಉಪಸ್ಥಿತರಿದ್ದರು.

Subscribe to our newsletter!

Other related posts

error: Content is protected !!