ಧರ್ಮಸ್ಥಳದ 2 ಕಿ.ಮೀ. ವ್ಯಾಪ್ತಿಯಲ್ಲಿ ಹೊಸ ಖಾಸಗಿ ಹೋಟೆಲ್, ವಸತಿಗೃಹ ಆರಂಭಿಸದಂತೆ ನಾಗರಿಕರ ಮನವಿ

 ಧರ್ಮಸ್ಥಳದ 2 ಕಿ.ಮೀ. ವ್ಯಾಪ್ತಿಯಲ್ಲಿ ಹೊಸ ಖಾಸಗಿ ಹೋಟೆಲ್, ವಸತಿಗೃಹ ಆರಂಭಿಸದಂತೆ ನಾಗರಿಕರ ಮನವಿ
Share this post
ಚಿತ್ರ: ಧರ್ಮಸ್ಥಳದ ನಾಗರಿಕರು ಶಾಸಕ ಹರೀಶ್ ಪೂಂಜರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಧರ್ಮಸ್ಥಳ, ಮಾರ್ಚ್ 07, 2021: ಧರ್ಮಸ್ಥಳ ದೇವಸ್ಥಾನದ ಎರಡು ಕಿ.ಮೀ. ವ್ಯಾಪ್ತಿಯಲ್ಲಿ ಯಾವುದೇ ಹೊಸ ಖಾಸಗಿ ಹೋಟೆಲ್, ವಸತಿಗೃಹಗಳು ಆರಂಭಿಸದಂತೆ ಸರ್ಕಾರ ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕೆಂದು ಭಾನುವಾರ ಊರಿನ ನಾಗರಿಕರು ಶಾಸಕ ಹರೀಶ್ ಪೂಂಜ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

,”ಎಂಟು ಶತಮಾನಗಳ ಇತಿಹಾಸ ಮತ್ತು ಪರಂಪರೆಯನ್ನು ಹೊಂದಿರುವ ನಾಡಿನ ಪವಿತ್ರ ಕ್ಷೇತ್ರ ಧರ್ಮಸ್ಥಳವು ಸರ್ವಧರ್ಮ ಸಮನ್ವಯ ಕೇಂದ್ರವೆಂದು ರಾಷ್ಟ್ರಮಟ್ಟದಲ್ಲಿ ಗುರುತಿಸಲ್ಪಟ್ಟಿದೆ, ದೇಶದೆಲ್ಲೆಡೆಯಿಂದ ಪ್ರತಿ ದಿನ ಸಹಸ್ರಾರು ಭಕಾದಿಗಳು ಇಲ್ಲಿಗೆ ಬಂದು ಶ್ರೀ ಮಂಜುನಾಥ ಸ್ವಾಮಿಯನ್ನು ಆರಾಧಿಸುತ್ತಾರೆ. ಇಲ್ಲಿಯ ಸಾನ್ನಿಧ್ಯ ರಕ್ಷಣೆಗಾಗಿ ವಿವಿಧ ಪೂಜೆಗಳು, ಉತ್ಸವಗಳು ನಡೆಯುತ್ತವೆ. 2016ರಲ್ಲಿ ‘ಇಂಡಿಯಾ ಟುಡೆ” ಸಮೀಕ್ಷೆಯಂತೆ ಧರ್ಮಸ್ಥಳವು ದೇಶದ ಸ್ವಚ್ಛ ಧಾರ್ಮಿಕ ಕ್ಷೇತ್ರ ಎಂಬ ಮಾನ್ಯತೆಯೊಂದಿಗೆ “ಸಫಾಯಿಗಿರಿ” ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಭಾರತದ ಸವೋಚ್ಛ ನ್ಯಾಯಾಲಯವು ದೇಶದ ಇತರ ಕ್ಷೇತ್ರಗಳಿಗೆ ಧರ್ಮಸ್ಥಳವು ಮಾದರಿ ಕ್ಷೇತ್ರ ಎಂದು ಮೆಚ್ಚುಗೆ ವ್ಯಕ್ತಪಡಿಸಿದೆ,” ಎಂದು ನಾಗರಿಕರು ಪತ್ರದಲ್ಲಿ ತಿಳಿಸಿದ್ದಾರೆ.

“ಇಲ್ಲಿನ ಯಾವುದೇ ಅಂಗಡಿ-ಮುಗ್ಗಟ್ಟುಗಳಲ್ಲಿ ಬೀಡಿ, ಸಿಗರೇಟು, ಗುಟ್ಕಾ ಹಾಗೂ ಅಮಲು ಪದಾರ್ಥಗಳ ಮಾರಾಟವನ್ನು ಸಾರ್ವಜನಿಕರೇ ಸ್ವ-ಇಚ್ಛೆಯಿಂದ ನಿಷೇಧಿಸಿರುತ್ತಾರೆ. ಆದರೆ, ಇತ್ತೀಚೆಗೆ ಕೆಲವು ಖಾಸಗಿ ಹೋಟೆಲ್‍ಗಳು, ವಸತಿಗೃಹಗಳು ನಿರ್ಮಾಣಗೊಳ್ಳುತ್ತಿರುವ ಸೂಚನೆ ಕಂಡು ಬಂದಿದೆ. ಇವುಗಳಿಗೆ ಪರವಾನಿಗೆ ನೀಡಿದರೆ ಕ್ಷೇತ್ರದ ಪಾವಿತ್ರ್ಯತೆಗೆ ಧಕ್ಕೆಯಾಗುತ್ತದೆ. ಆದುದರಿಂದ ಧರ್ಮಸ್ಥಳದಲ್ಲಿ ದೇವಸ್ಥಾನದ ಸುತ್ತ ಎರಡು ಕಿ.ಮೀ. ವ್ಯಾಪ್ತಿಯಲ್ಲಿ ಹೊಸದಾಗಿ ಯಾವುದೇ ಖಾಸಗಿ ಹೋಟೆಲ್, ವಸತಿಗೃಹ ಆರಂಭಿಸದಂತೆ ಸ್ಥಳೀಯ ಗ್ರಾಮ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಜಿಲ್ಲಾ ಪಂಚಾಯಿತಿ ಹಾಗೂ ಸರ್ಕಾರ ಕಟ್ಟುನಿಟ್ಟಿನ ಕ್ರಮ ಜಾರಿಗೊಳಿಸಬೇಕು,” ಎಂದು ಊರಿನ ನಾಗರಿಕರು ಶಾಸಕ ಹರೀಶ್ ಪೂಂಜರ ಮೂಲಕ ರಾಜ್ಯದ ಮುಖ್ಯ ಮಂತ್ರಿಗಳಿಗೆ ಧರ್ಮಸ್ಥಳದಲ್ಲಿ ಭಾನುವಾರ ಮನವಿ ಸಲ್ಲಿಸಿದ್ದಾರೆ.

ಧರ್ಮಸ್ಥಳ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಶ್ರೀನಿವಾಸ ರಾವ್, ಸದಸ್ಯರಾದ ಮುರಳೀಧರ ದಾಸ್ ಮತ್ತು ರವಿ ಕುಮಾರ್, ವಾಹನ ಚಾಲಕರು ಮತ್ತು ಮಾಲಕರ ಸಂಘದ ಅಧ್ಯಕ್ಷ ಕೃಷ್ಣ ಶೆಟ್ಟಿ, ವಿಶ್ವ ಹಿಂದೂ ಪರಿಷತ್ ಜಿಲ್ಲಾ ಕಾರ್ಯಾಧ್ಯಕ್ಷ ಭಾಸ್ಕರ ಧರ್ಮಸ್ಥಳ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಡಿ. ಪ್ರಭಾಕರ ಮತ್ತು ಊರಿರ ನಾಗರಿಕರು ಉಪಸ್ಥಿತರಿದ್ದರು.

ಮಾನ್ಯ ಮುಖ್ಯ ಮಂತ್ರಿಯವರನ್ನು ಭೇಟಿಯಾಗಿ ಮನವಿಯನ್ನು ಅವರ ಗಮನಕ್ಕೆ ತಂದು ಸಮಸ್ಯೆ ಪರಿಹಾರದ ಬಗ್ಯೆ ಸೂಕ್ತ ಪ್ರಯತ್ನ ಮಾಡುವುದಾಗಿ ಶಾಸಕ ಹರೀಶ್ ಪೂಂಜ ಭರವಸೆ ನೀಡಿದರು.

Subscribe to our newsletter!

Other related posts

error: Content is protected !!