ಕೊಡಗು ಜಿಲ್ಲೆ ಭೂಕುಸಿತ ಪ್ರದೇಶಕ್ಕೆ ಕೇಂದ್ರ ತಂಡ ಭೇಟಿ

 ಕೊಡಗು ಜಿಲ್ಲೆ ಭೂಕುಸಿತ  ಪ್ರದೇಶಕ್ಕೆ ಕೇಂದ್ರ ತಂಡ ಭೇಟಿ
Share this post

ಮಡಿಕೇರಿ ಸೆ.09 : ಕೊಡಗು ಜಿಲ್ಲೆಗೆ ಆಗಮಿಸಿದ ಕೇಂದ್ರ ತಂಡದ ಅಧಿಕಾರಿಗಳು ಜಿಲ್ಲೆಯಲ್ಲಿ ಮಳೆಯಿಂದ ಹಾನಿಯಾಗಿರುವ ವಿವಿಧ ಪ್ರದೇಶಗಳಿಗೆ ಮಂಗಳವಾರ ಭೇಟಿ ನೀಡಿ ವಸ್ತು ಸ್ಥಿತಿಯ ಬಗ್ಗೆ ಮಾಹಿತಿ ಪಡೆದರು.

ಕೇಂದ್ರ ತಂಡದ ಮುಖ್ಯಸ್ಥರಾದ ಭಾರತ ಸರ್ಕಾರದ ಗೃಹ ಮಂತ್ರಾಲಯದ ಜಂಟಿ ಕಾರ್ಯದರ್ಶಿ ಕೆ.ವಿ.ಪ್ರತಾಪ್ ಅವರ ನೇತೃತ್ವದ ತಂಡ ಜಿಲ್ಲೆಯ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮತ್ತು ಜಿಲ್ಲಾ ಮಟ್ಟದ ಅಧಿಕಾರಿಗಳು ಹಾನಿಯಾದ ಸ್ಥಳಗಳ ಭೇಟಿಯ ಸಂದರ್ಭ ಕೇಂದ್ರ ತಂಡಕ್ಕೆ ಅಗತ್ಯ ಮಾಹಿತಿ ಒದಗಿಸುವುದರೊಂದಿಗೆ ಜಿಲ್ಲೆಯ ಸ್ಥಿತಿಗತಿಯ ಬಗ್ಗೆ ತಂಡಕ್ಕೆ ಮನವರಿಕೆ ಮಾಡಿದರು. ಕಡಿದಾದ ಮತ್ತು ವಾಹನ ಸಂಚರಿಸ ಪ್ರದೇಶಗಳಲ್ಲಿ ಒಂಟಾದ ಬೆಳೆ ಹಾನಿಯನ್ನು ಕೇಂದ್ರ ತಂಡದ ಅಧಿಕಾರಿಗಳು ವೀಕ್ಷಿಸಿದರು.

ಬೆಳೆ ಹಾನಿ ಪ್ರದೇಶಗಳಿಗೆ ಮತ್ತು ಮತ್ತಿತರ ಹಾನಿ ಪ್ರದೇಶಗಳಿಗೆ ಭೇಟಿ ನೀಡಿದ ಸಂದರ್ಭ ಅಧಿಕಾರಿಗಳಿಂದ ಮಾತ್ರವಲ್ಲದೇ ಅಲ್ಲಿನ ಸ್ಥಳೀಯ ಜನಪ್ರತಿನಿಧಿಗಳು, ಜಮೀನಿನ ಮಾಲಿಕರು ಮತ್ತು ಗ್ರಾಮಸ್ಥರಿಂದ ಸೂಕ್ತ ಮಾಹಿತಿ ಪಡೆದರು.

ಮೊದಲಿಗೆ ಮಡಿಕೇರಿ ತಾಲೂಕಿನ ಕಡಗದಾಳುವಿನ ಬೊಟ್ಲಪ್ಪ ಪೈಸಾರಿಗೆ ಭೇಟಿ ನೀಡಿದ ಕೇಂದ್ರ ತಂಡ ಅಲ್ಲಿನ ಭೂಕುಸಿತ ಪ್ರದೇಶ ಮತ್ತು ಬೆಳೆಹಾನಿ ಸ್ಥಳಗಳನ್ನು ಪರಿಶೀಲಿಸಿದರು. ಈ ಸಂದರ್ಭ ತೋಟದ ಮಾಲೀಕರಿಂದಲೇ ಬೆಳೆ ಹಾನಿಯ ಬಗ್ಗೆ ಮಾಹಿತಿ ಪಡೆದರು.

ಭಾಗಮಂಡಲಕ್ಕೆ ತೆರಳಿದ ತಂಡವು ಅಲ್ಲಿನ ಭೂಕುಸಿತದಿಂದಾಗಿ ಕಾಫಿ ಮತ್ತು ಕಾಳುಮೆಣಸು ಬೆಳೆ ಹಾನಿಯಾದ ಸ್ಥಳವನ್ನು ವೀಕ್ಷಿಸಿದರು. ಅಲ್ಲದೆ ಬೆಳೆ ಹಾನಿ ಸಂಬಂಧ ಜಮೀನಿನ ಮಾಲೀಕರು ಮತ್ತು ಸಂಬಂಧಪಟ್ಟ ಅಧಿಕಾರಿಗಳಿಂದ ಸ್ಥಳದಲ್ಲಿ ಮಾಹಿತಿ ಪಡೆದರು.

ನಂತರ ತಲಕಾವೇರಿಯ ಗಜಗಿರಿ ಬೆಟ್ಟದಲ್ಲಿ ಭೂಕುಸಿತ ಸ್ಥಳಕ್ಕೆ ತಂಡ ಭೇಟಿ ನೀಡಿತು. ಈ ಸಂದರ್ಭ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ ಅವರು ಆಗಸ್ಟ್ ಮೊದಲ ವಾರದಲ್ಲಿ ಇದ್ದ ಪರಿಸ್ಥಿತಿಯನ್ನು ಛಾಯಾಚಿತ್ರದ ಮೂಲಕ ಕೇಂದ್ರ ತಂಡಕ್ಕೆ ವಿವರಿಸಿದರು.

ಬಳಿಕ ನಾರಾಯಣಾಚಾರ್ ಅವರ ಮನೆ ಇದ್ದ ಸ್ಥಳಕ್ಕೆ ತೆರಳಿ ಪರಿವೀಕ್ಷಣೆ ನಡೆಸಿದ ಭಾರತ ಸರ್ಕಾರದ ಗೃಹ ಮಂತ್ರಾಲಯದ ಜಂಟಿ ಕಾರ್ಯದರ್ಶಿ ಕೆ.ವಿ.ಪ್ರತಾಪ್, ಭಾರತ ಸರ್ಕಾರದ ವಿತ್ತ ಸಚಿವಾಲಯದ ಡಾ.ಭಾತೇರ್ಂದು ಕುಮಾರ್ ಸಿಂಗ್ ಹಾಗೂ ಭಾರತ ಸರ್ಕಾರದ ಕೆ.ಎಸ್.ಡಿ.ಎಂ.ಎ. ಆಯುಕ್ತರಾದ ಮನೋಜ್ ರಾಜನ್ ಅವರು ಜಿಲ್ಲಾಧಿಕಾರಿ ಅವರಿಂದ ಘಟನೆ ನಡೆದ ದಿನಾಂಕ, ರಕ್ಷಣಾ ಕಾರ್ಯಾಚರಣೆ ಮತ್ತು ಮೃತದೇಹಗಳ ಪತ್ತೆ ಕಾರ್ಯಾಚರಣೆ ಸಂಬಂಧ ಮಾಹಿತಿ ಪಡೆದರು.

ಈ ಮಧ್ಯೆ ಭಾಗಮಂಡಲದ ಕೋರಂಗಾಲದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಳೆಯಿಂದ ಸಂಪೂರ್ಣವಾಗಿ ಹಾನಿಯಾಗಿರುವ ಶಾಲಾ ಕಟ್ಟಡವನ್ನು ಕೇಂದ್ರ ತಂಡದ ಅಧಿಕಾರಿಗಳು ಪರಿಶೀಲಿಸಿದರು. ಕೋರಂಗಾಲದ ರಸ್ತೆ ಹಾನಿಯಾಗಿರುವ ಸ್ಥಳಕ್ಕೆ ಭೇಟಿ ನೀಡಿ ವಾಸ್ತವ ಪರಿಸ್ಥಿತಿಯ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದರು.

ಜೊತೆಗೆ ಬಲ್ಲಮಾವಟಿ ಗ್ರಾ.ಪಂ.ವ್ಯಾಪ್ತಿಯ ದೊಡ್ಡ ಪುಲಿಕೋಟುವಿನ ಹಾನಿಯಾದ ಅಂಗನವಾಡಿ ಕಟ್ಟಡವನ್ನು ಕೇಂದ್ರ ತಂಡದ ಅಧಿಕಾರಿಗಳು ವೀಕ್ಷಣೆ ಮಾಡಿದರು. ಇದರೊಂದಿಗೆ ಚೇರಂಬಾಣೆಯ ಬೇಂಗೂರುವಿನಲ್ಲಿ ಉಂಟಾಗಿರು ಕಾಫಿ ಮತ್ತು ಕಾಳುಮೆಣಸು ಹಾನಿಯ ಬಗ್ಗೆ ಸ್ಥಳಕ್ಕೆ ತೆರಳಿ ಪರಿಶೀಲಿಸಿದರು.

ಈ ವೇಳೆ ಜಿ.ಪಂ.ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾದ ಕವಿತಾ ಪ್ರಭಾಕರನ್ ಅವರು ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಉಂಟಾದ ಹಾನಿಯ ಬಗ್ಗೆ ಕೇಂದ್ರ ತಂಡದ ಅಧಿಕಾರಿಗಳಿಗೆ ಸಮರ್ಪಕ ಮಾಹಿತಿ ಒದಗಿಸಿ ಸೂಕ್ತ ಪರಿಹಾರ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಮಾಡಿದರು.
ಜಿ.ಪಂ.ಸಿಇಒ ಭನ್ವರ್ ಸಿಂಗ್ ಮೀನಾ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ, ಜಿಲ್ಲಾ ಮಟ್ಟದ ಅಧಿಕಾರಿಗಳು, ತಹಶೀಲ್ದಾರರು, ತಾ.ಪಂ. ಇಒ ಇತರರು ಇದ್ದರು.

Subscribe to our newsletter!

Other related posts