ಹಳ್ಳಿಗಳ ಅಭಿವೃದ್ಧಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಕೊಡುಗೆ ಅಪಾರ: ಸಚಿವ ಸಿ.ಟಿ.ರವಿ

 ಹಳ್ಳಿಗಳ ಅಭಿವೃದ್ಧಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಕೊಡುಗೆ ಅಪಾರ: ಸಚಿವ ಸಿ.ಟಿ.ರವಿ
Share this post

ಚಿಕ್ಕಮಗಳೂರು, ಸೆ.೦೫: ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿ ಮತ್ತು ಜನತೆಯು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯು ಸಮಾಜ ಮುಖಿಯಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿರುವುದು ಸಮಾಜಕ್ಕೆ ಬಹುದೊಡ್ಡ ಕೊಡುಗೆ ಎಂದು ಪ್ರವಾಸೋದ್ಯಮ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಅವರು ಹೇಳಿದರು.  

ಅವರು ಇಂದು ಕರ್ತಿಕೆರೆ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ದೊಡ್ಡ ಕೆರೆ ಬಳಕೆದರರ ಸಂಘದ ಸಹಭಾಗಿತ್ವದಲ್ಲಿ ಕರ್ನಾಟಕ ಕೆರೆ ಸಂಜೀವಿನಿ ಕಾರ್ಯಕ್ರಮದಡಿಯಲ್ಲಿ ಕರ್ತಿಕೆರೆಯ ದೊಡ್ಡಕೆರೆಯನ್ನು ಹಸ್ತಾಂತರಿಸಿ ಮಾತನಾಡಿದರು.

ಕೆರೆಗಳು ಹಳ್ಳಿಗಳ ಜೀವನಾಡಿಯಾಗಿದ್ದು ಕೆರೆ ತುಂಬಿದ್ದಲ್ಲಿ ಇಡಿ ಊರೇ ಸಂಪತ್ಭರಿತವಾಗಲಿದೆ ಎಂಬ ಮಾತಿನಂತೆ ಗ್ರಾಮೀಣ ಭಾಗದ ಕೆರೆಗಳು ಹೆಚ್ಚು ಮಹತ್ವ ಪಡೆದಿವೆ ರಾಜ್ಯದಲ್ಲಿ ಬರಡು ಪ್ರದೇಶಗಳಲ್ಲಿ ಕೆರೆಗಳನ್ನು ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು.

ಕೆರೆಗಳ ಸಮರ್ಪಕ ನಿರ್ವಹಣೆಗಾಗಿ ನೂತನವಾಗಿ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿಗಾಗಿ ನೂತನ ಪ್ರಾಧಿಕಾರವನ್ನು ರಚಿಸಲಾಗಿದೆ ಇದರ ಮೂಲಕ ಕೆರೆಗಳನ್ನು ಅಭಿವೃದ್ಧಿ ಪಡಿಸುವ ಸಂಜೀವಿನಿ ಯೋಜನೆಯನ್ನು ಜಾರಿಗೆ ತರಲಾಗಿದೆ ಎಂದ ಅವರು ರಾಜ್ಯಾದ್ಯಂತ ಸುಮಾರು ೧೪೬ ಕೆರೆಗಳಲ್ಲಿ ಕೆರೆ ಬಳಕೆದಾರರ ಸಂಘವನ್ನು ರಚಿಸಿ ಕೆರೆಗಳ ಹೂಳೆತ್ತಿ ಪುನಶ್ಚೇತನಗೊಳಿಸಲಾಗುತ್ತಿದ್ದು, ಅದರಂತೆ ಜಿಲ್ಲೆಯ ಕರ್ತಿಕೆರೆ ದೊಡ್ಡಕೆರೆಯ ನಿರ್ವಹಣೆಯನ್ನು ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆಗೆ ಹಸ್ತಾಂತರಿಸಲಾಗಿದೆ ಎಂದರು.

ರಾಜ್ಯದಲ್ಲಿ ಡಾ. ವೀರೇಂದ್ರ ಹೆಗ್ಗಡೆ ನೇತೃತ್ವದ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಸಂಸ್ಥೆಯು ಸಾಲ ಯೋಜನೆ, ಶುದ್ಧ ಗಂಗಾ ಕುಡಿಯುವ ನೀರಿನ ಘಟಕಗಳ ಸ್ಥಾಪನೆ, ಮಹಿಳಾ ಸ್ವ-ಉದ್ಯೋಗ, ಕೃಷಿ, ಗುಡಿ ಕೈಗಾರಿಗೆಗಳಿಗೆ ಪ್ರೋತ್ಸಾಹ ಸೇರಿದಂತೆ ಹತ್ತಾರು ಸಮಾಜಮುಖಿ ಕಾರ್ಯಗಳನ್ನು ಮಾಡುವ ಮೂಲಕ ಗ್ರಾಮೀಣ ಜನತೆಯು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಅನುಕೂಲ ಮಾಡಿಕೊಡುತ್ತಿದೆ ಎಂದರು.

 ಸಂರಕ್ಷಣಾ ಯೋಜನೆ ಅಡಿ ಪುರಾತನ ದೇವಾಲಯಗಳ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಪ್ರವಾಸೋದ್ಯಮ ಇಲಾಖೆಯಿಂದ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಧರ್ಮೋತ್ತಾನ ಟ್ರಸ್ಟ್‌ಗೆ ರೂ. ೧೦ ಕೋಟಿ ಬಿಡುಗಡೆ ಮಾಡಲಾಗಿದ್ದು, ಈ ಮೂಲಕ ಪುರಾತತ್ವ ಇಲಾಖೆಗೆ ಸೇರಿದ ಹಳೆ ದೇವಾಲಯಗಳು, ಕಲ್ಯಾಣಿಗಳು, ಗೋಪುರಗಳನ್ನು ಸಂರಕ್ಷಿಸಲು ಯೋಜನೆ ರೂಪಿಸಲಾಗಿದೆ ಎಂದ ಅವರು ಜಿಲ್ಲೆಯಲ್ಲಿ ಕಳಸಾಪುರ ಕಳಸೇಶ್ವರ, ಮುತ್ತಿನಪುರದ ವಿರೂಪಾಕ್ಷೇಶ್ವರ, ಚೆನ್ನಕೇಶ ದೇವಾಲಯ ಸೇರಿದಂತೆ ವಿವಿಧ ದೇವಾಲಯಗಳು ಜೀರ್ಣೋದ್ಧಾರ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ವಿಧಾನಸಭಾ ಶಾಸಕ ಎಸ್.ಎಲ್.ಭೋಜೇಗೌಡ, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುಜಾತ ಕೃಷ್ಣಪ್ಪ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷೆ ಶುಭಾ ಸತ್ಯಮೂರ್ತಿ, ಜಿಲ್ಲಾ ಪಂಚಾಯಿತಿ ಉಪಾಧ್ಯಕ್ಷ ಬಿ.ಜಿ. ಸೋಮಶೇಖರಪ್ಪ, ಜಿ.ಪಂ ಸದಸ್ಯರಾದ ಜಸಿಂತಾ ಅನಿಲ್ ಕುಮಾರ್, ಕವಿತಾ ಲಿಂಗರಾಜ್, ತಾಲ್ಲೂಕು ಪಂಚಾಯಿತಿ ಉಪಾಧ್ಯಕ್ಷೆ ಶಾರದ ಶಶಿಧರ್, ತಾ.ಪಂ ಸದಸ್ಯ ಜಯಣ್ಣ,  ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿಯ ಪ್ರಾದೇಶಿಕ ನಿರ್ದೇಶಕ ಶ್ರೀ ಹರಿ, ದೊಡ್ಡಕೆರೆ ಬಳಕೆದಾರರ ಸಂಘದ ಅಧ್ಯಕ್ಷ ಆನಂದ್ ರಾಜ್ ಅರಸ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.  

Subscribe to our newsletter!

Other related posts

error: Content is protected !!